ಇಸ್ರೇಲ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ
ಟೆಲ್ ಅವಿವ್: ಭಾರತೀಯ ಮೂಲದ ಇಸ್ರೇಲ್ ನಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ಸಾಗರೋತ್ತರ ನಾಗರಿಕರು ಕಾರ್ಡುಗಳು(ಒಸಿಐ ಕಾರ್ಡುಗಳು) ದೊರೆಯಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ ಅವರು ಇಸ್ರೇಲ್ ನ ಜಿಲ್ಲೆ ಟೆಲ್ ಅವಿವ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿ, ಇಸ್ರೇಲ್ ನಲ್ಲಿ ಕಡ್ಡಾಯ ಮಿಲಿಟರಿ ಸೇವೆ ಸಲ್ಲಿಸಿದವರಿಗೆ ಕೂಡ ಸಾಗರೋತ್ತರ ನಾಗರಿಕ ಕಾರ್ಡು ನೀಡಲಾಗುವುದು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಭಾಗವಹಿಸಿದ್ದರು.
ದೆಹಲಿ, ಮುಂಬೈ ಮತ್ತು ಟಲ್ ಅವಿವ್ ನಡುವೆ ನೇರ ವಿಮಾನ ಸೇವೆಯನ್ನು
ಆರಂಭಿಸಲಾಗುವುದು. ಇದರಿಂದ ಭಾರತೀಯರು ಮತ್ತು ಇಸ್ರೇಲ್ ನಾಗರಿಕರ ಮಧ್ಯೆ ಸಂಪರ್ಕ ಹೆಚ್ಚಾಗಲಿದೆ. ಇಸ್ರೇಲ್ ನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ತೆರೆಯಲಾಗುವುದು. ಈ ಮೂಲಕ ಇಲ್ಲಿನ ಭಾರತೀಯರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಪ್ರಧಾನಿ ತಿಳಿಸಿದರು.
ಒಸಿಐ ಕಾರ್ಡುಗಳು ಪಡೆಯಲು ಇಲ್ಲಿನ ಭಾರತೀಯರು ಎದುರಿಸುತ್ತಿರುವ ತೊಂದರೆಗಳು ತಮ್ಮ ಗಮನಕ್ಕೆ ಬಂದಿದೆ. ಇದಕ್ಕಾಗಿ ಭಾರತ ಸರ್ಕಾರ ನಿಯಮಗಳನ್ನು ಸರಳಗೊಳಿಸಿದೆ. ಇಸ್ರೇಲ್ ನಲ್ಲಿ ಕಡ್ಡಾಯ ಮಿಲಿಟರಿ ಸೇವೆಗಳನ್ನು ಸಲ್ಲಿಸಿದವರು ಕೂಡ ಒಸಿಐ ಕಾರ್ಡುಗಳನ್ನು ಪಡೆಯಲಿದ್ದಾರೆ ಎಂದು ಮೋದಿಯವರು ಹೇಳಿದಾಗ ನೆರೆದಿದ್ದ ಭಾರತೀಯ ಸಮುದಾಯ ಕರತಾಡನದೊಂದಿಗೆ ಸ್ವಾಗತಿಸಿತು.
ಭಾರತ ಮತ್ತು ಯಹೂದಿ ರಾಷ್ಟ್ರ ಇಸ್ರೇಲ್ ನ ಸಂಬಂಧ ಶತಮಾನಗಳಷ್ಟು ಹಳೆಯದು. ಆದರೆ ವಾಸ್ತವದ ವಿಚಾರವೆಂದರೆ ಸ್ವಾತಂತ್ರ್ಯ ಸಿಕ್ಕಿ ಕಳೆದ 70 ವರ್ಷಗಳಲ್ಲಿ ಇಲ್ಲಿಗೆ ಭಾರತದ ಯಾವೊಬ್ಬ ಪ್ರಧಾನ ಮಂತ್ರಿ ಭೇಟಿ ನೀಡಿರಲಿಲ್ಲ. ಇದು ಹಿಂದಿನ ಸರ್ಕಾರಗಳ ಮನೋಧರ್ಮವನ್ನು ಸ್ಪಷ್ಟಪಡಿಸುತ್ತದೆ. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಈ ನೆಲಕ್ಕೆ ನಿಮ್ಮ ಹಾರೈಕೆ ಕೋರಲು ಕಾಲಿಟ್ಟಿದ್ದಾರೆ ಎಂದು ಮೋದಿಯವರು ಹೇಳಿದಾಗ ನೆರೆದಿದ್ದ ಭಾರತೀಯ ಸಮೂಹ ಮೋದಿ, ಮೋದಿ ಎಂದು ಉದ್ಘಾರ ಹಾಕಿತು.
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ನನ್ನ ಸ್ನೇಹಿತ ಎಂದು ಬಣ್ಣಿಸಿದ ಮೋದಿ, ತಾವು ನಿನ್ನೆ ಇಸ್ರೇಲ್ ಗೆ ಬಂದಿಳಿದಾಗಿನಿಂದ ಇಲ್ಲಿಯವರೆಗೆ ಸಿಕ್ಕಿದ ಸ್ವಾಗತ ಮತ್ತು ಉಪಚಾರವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಶೋಧನೆ ಮತ್ತು ವೈಜ್ಞಾನಿಕ ಅತ್ಯಾಧುನಿಕತೆಯಲ್ಲಿ ಇಸ್ರೇಲ್ ನ್ನು ಬಣ್ಣಿಸಿದ ಪ್ರಧಾನಿ, ದೇಶದ ಗಾತ್ರ ಮತ್ತು ಜನಸಂಖ್ಯೆ ಮುಖ್ಯವಲ್ಲ , ಬದಲಾಗಿ ಜನರ ಉತ್ಸಾಹ, ಕಾಳಜಿ ಮುಖ್ಯ ಎಂಬುದನ್ನು ಇಸ್ರೇಲ್ ಸಾರಿದೆ. ಇಲ್ಲಿ ಸುಮಾರು 600 ಮಂದಿ ಭಾರತೀಯ ವಿದ್ಯಾರ್ಥಿಗಳಿದ್ದು ಅವರು ಭವಿಷ್ಯದ ಸಂಬಂಧ ಸುಧಾರಣೆಗೆ ಕೊಡುಗೆ ನೀಡಬಹುದು ಎಂದರು.
ಮಾನವೀಯತೆಗೆ ಇಸ್ರೇಲ್ ನ ಹಿಂದಿನ ಪ್ರಧಾನಿ ಷಿಮೋನ್ ಪೆರೆಸ್ ಎಡೆಬಿಡದೆ ಮಾಡಿದ ಕೆಲಸವನ್ನು ಕೂಡ ಪ್ರಧಾನಿ ನೆನಪಿಸಿಕೊಂಡರು.
2008ರಲ್ಲಿ ಮುಂಬೈ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಭಾರತೀಯ ದಾದಿಯಿಂದ 11 ವರ್ಷದ ಇಸ್ರೇಲ್ ಬಾಲಕ ಮೊಶೆ ಹಾಲ್ಟ್ಜ್ಬರ್ಗ್ ಬದುಕುಳಿದದ್ದನ್ನು ಉಲ್ಲೇಖಿಸಿದ ಪ್ರಧಾನಿ, ಭಯೋತ್ಪಾದನೆ ಹೊರತಾಗಿಯೂ ಜೀವವನ್ನು ಹೇಗೆ ಕಾಪಾಡಬಹುದು ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ ಎಂದು ಹೇಳಿದರು. ಪ್ರಧಾನಿ ನಿನ್ನೆ ಬಾಲಕ ಮೊಶೆಯನ್ನು ಭೇಟಿ ಮಾಡಿದ್ದರು.
ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಜೆರುಸಲೇಮ್ ಮತ್ತು ಹೈಫಾ ವಿಮೋಚನೆಯಲ್ಲಿ ಭಾರತೀಯ ಸೇನೆಯ ಕೊಡುಗೆಯನ್ನು ಪ್ರಧಾನಿ ಸ್ಮರಿಸಿದರು. ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ಗೌರವ ನಮನ ಸಲ್ಲಿಸಲು ಪ್ರಧಾನಿ ನಾಳೆ ಹೈಫಾಕ್ಕೆ ಭೇಟಿ ನೀಡಲಿದ್ದಾರೆ.
ಹೀಗೆ 1 ಗಂಟೆ ಕಾಲ ಭಾಷಣ ಮಾಡಿದ ಮೋದಿ ತಮ್ಮ ಸರ್ಕಾರ ಜನರಿಗಾಗಿ ಕೈಗೊಂಡಿರುವ ಹತ್ತು ಹಲವು ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಇಸ್ರೇಲ್ ಪ್ರಧಾನಿ ನೆತನ್ಯಾಹು, ಭಾರತ ಮತ್ತು ಇಸ್ರೇಲ್ ನಡುವಿನ ಸಹಭಾಗಿತ್ವ ಸ್ವರ್ಗದಲ್ಲಿ ನಡೆದಿದ್ದು, ಇದೀಗ ಇಲ್ಲಿ ಕಾಣುತ್ತಿದ್ದೇವೆ. ಹಲವು ಕಾರ್ಯಕ್ರಮಗಳಲ್ಲಿ ಸಹಭಾಗಿತ್ವಕ್ಕೆ ತಾವು ಮತ್ತು ಭಾರತದ ಪ್ರಧಾನಿ ಮಾತುಕತೆ ನಡೆಸಿದ್ದು ಅದಕ್ಕೆ ಅನಿವಾಸಿ ಭಾರತೀಯರು ಸೇತುವೆ ರೀತಿ. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಹೇಳಿದರು.
ಎರಡು ಪ್ರಜಾಪ್ರಭುತ್ವ ದೇಶಗಳ ಮಧ್ಯೆ ಭವಿಷ್ಯದ ಒಳಿತಿಗೆ ಹಲವು ಕ್ಷೇತ್ರಗಳಲ್ಲಿ ಸಹಕಾರ ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics