ಸಿಯೋಲ್: ದಕ್ಷಿಣ ಕೊರಿಯಾವನ್ನು ನಾಶ ಮಾಡುವುದು ನಮಗೆ ಕೇಕ್ ತಿಂದಷ್ಟೇ ಸುಲಭ ಎಂದು ಉತ್ತರ ಕೊರಿಯಾ ಹೇಳಿರುವುದಾಗಿ ದಕ್ಷಿಣ ಕೊರಿಯಾ ಮಾಧ್ಯಮಗಳು ವರದಿ ಮಾಡಿವೆ.
ಸಿಯೋಲ್ ನಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಸೇರಿ ಜಂಟಿ ಸಮಾರಾಭ್ಯಾಸ ನಡೆಸಲು ಸಿದ್ಥತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಂತಹದೊಂದು ಬೆದರಿಕೆಪೂರಿತ ಮಾತುಗಳನ್ನಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಕೊರಿಯಾ ಇತ್ತೀಚೆಗೆ ಸತತವಾಗಿ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಆಂತಕಕ್ಕೊಳಗಾಗಿರುವ ದಕ್ಷಿಣ ಕೊರಿಯಾ ಇದೀಗ ಅಮೆರಿಕದೊಂದಿಗೆ ಜಂಟಿ ಸಮರಾಭ್ಯಾಸಕ್ಕೆ ಮುಂದಾಗಿದೆ.
ಉತ್ತರ ಕೊರಿಯಾಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ-ಇನ್ ಹೇಳಿದ್ದರು. ಇದಕ್ಕೆ ಕಿಡಿಕಾರಿರುವ ಕಿಮ್ ಜಾಂಗ್ ಉನ್ ನಮಗೀಗ ನಿಮ್ಮನ್ನು ಮಾತ್ರವಲ್ಲ, ಅಮೆರಿಕವನ್ನೂ ನಾಶ ಮಾಡಬಲ್ಲಂಥ ಶಕ್ತಿಯಿದೆ ಎಂದು ಬೆದರಿಕೆ ಹಾಕಿದ್ದಾರೆ.