ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ಇಸ್ಲಾಮಾಬಾದ್: ಭಾರತೀಯ ರಾಯಭಾರ ಕಚೇರಿಯಲ್ಲಿ ವೀಸಾ ಅರ್ಜಿ ತಿರಸ್ಕಾರಗೊಂಡಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಚಿಕಿತ್ಸೆಗೆ ಬರಲು ಸಹಾಯ ಮಾಡುವಂತೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಕಿಸ್ತಾನದ 25 ವರ್ಷದ ಮಹಿಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದಾರೆ.
ಅಮೆಲೋಬ್ಲ್ಯಾಸ್ಟೊಮಾ ಎಂಬ ಬಾಯಿಯಲ್ಲಿ ಗಡ್ಡೆ ಕ್ಯಾನ್ಸರ್ ನಿಂದ ಫೈಜಾ ತನ್ವೀರ್ ಎಂಬ ಮಹಿಳೆ ಬಳಲುತ್ತಿದ್ದು ಆಕೆಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಇದಕ್ಕಾಗಿ ಗಜಿಯಾಬಾದ್ ನ ಇಂದ್ರಪ್ರಸ್ಥ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದು ಈಗಾಗಲೇ ಆಕೆ 10 ಲಕ್ಷ ರೂಪಾಯಿ ಮುಂಗಡ ಪಾವತಿ ಮಾಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.
ಆದರೆ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಭಾರತೀಯ ಹೈಕಮಿಷನ್ ಕಚೇರಿ ಆಕೆಯ ವೈದ್ಯಕೀಯ ವೀಸಾ ಅರ್ಜಿಯನ್ನು ತಿರಸ್ಕರಿಸಿದೆ. ಎರಡು ದೇಶಗಳ ಮಧ್ಯೆ ದ್ವಿಪಕ್ಷೀಯ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ತನ್ವೀರ್ ಳ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಆಕೆಯ ತಾಯಿ ಹೇಳುತ್ತಾರೆ.
ಇದರಿಂದಾಗಿ ಭಾರತದ ವಿದೇಶಾಂಗ ಸಚಿವೆಯ ಗಮನ ಸೆಳೆಯಲು ಸಾಮಾಜಿಕ ಮಾಧ್ಯಮದಲ್ಲಿ ತನ್ವೀರ್ ಮನವಿ ಮಾಡಿಕೊಂಡಿದ್ದಾರೆ.
ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಅನೇಕ ಟ್ವೀಟ್ ಗಳ ಮುಖಾಂತರ ತನ್ವೀರ್ ಸುಷ್ಮಾ ಸ್ವರಾಜ್ ಗೆ ಒತ್ತಾಯಿಸಿದ್ದಾರೆ. ತನ್ನ ಕ್ಯಾನ್ಸರ್ ಕಾಯಿಲೆ ಬಗ್ಗೆ ಫೋಟೋ ಮತ್ತು ವಿಡಿಯೊವನ್ನು ಕೂಡ ತನ್ವೀರ್ ಟ್ವಿಟ್ಟರ್ ನಲ್ಲಿ ಹಾಕಿದ್ದಾಳೆ.
ತನ್ನ ಒಂದು ಟ್ವೀಟ್ ನಲ್ಲಿ ಆಕೆ, ದಯಮಾಡಿ ನನ್ನ ಜೀವವನ್ನು ಉಳಿಸಲು ಸಹಾಯ ಮಾಡಿ ಎಂದು ಬೇಡಿಕೊಂಡು ಸುಷ್ಮಾ ಸ್ವರಾಜ್ ಅವರನ್ನು ಟ್ಯಾಗ್ ಮಾಡಿದ್ದಾಳೆ. ಮತ್ತೊಂದು ಟ್ವೀಟ್ ನಲ್ಲಿ ಸುಷ್ಮಾರವರೇ ದಯಮಾಡಿ ಸಹಾಯ ಮಾಡಿ ಎಂದು ಅಂಗಲಾಚಿದ್ದಾಳೆ.
ಕಳೆದ ತಿಂಗಳು ತುರ್ತು ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪಾಕಿಸ್ತಾನದ ಮಗುವಿನ ಪೋಷಕರಿಗೆ ವೀಸಾ ಸಿಗಲು ಸಚಿವೆ ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದರು.