ಇಸಿಸ್ ಉಗ್ರರ ವಿರುದ್ಧ ಗೆಲವು ಸಾಧಿಸಿದ ಹಿನ್ನಲೆಯಲ್ಲಿ ಸೇನೆ ಹಾಗೂ ಪೊಲೀಸರಿಗೆ ಅಭಿನಂದನೆ ಹೇಳುತ್ತಿರುವ ಇರಾಕ್ ಪ್ರಧಾನಿ
ಮೊಸುಲ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರರ ಹಿಡಿತದಲ್ಲಿರುವ ಮೊಸುಲ್ ನಲ್ಲಿ ಇರಾಕ್ ಸೇನೆ ಗೆಲವು ಸಾಧಿಸಿದೆ ಎಂದು ಇರಾಕ್ ಪ್ರಧಾನಿ ಹೈದರ್ ಅಲ್ ಅಬಾಡಿ ಘೋಷಣೆ ಮಾಡಿದ್ದಾರೆ.
ಉಗ್ರರಿಂದ ವಿಮೋಚನೆಗೊಂಡಿರುವ ಮೊಸುಲ್ ಗೆ ಅಬಾಡಿ ಆಗಮಿಸಿದ್ದು, ಉಗ್ರರ ವಿರುದ್ಧ ಕಾದಾಡಿ ಐತಿಹಾಸಿಕ ಗೆಲವು ದಾಖಲಿಸಿದ ಸೈನಿಕರಿಗೆ, ಜನರಿಗೆ ಧನ್ಯವಾದಗಳ್ನು ಅರ್ಪಿಸಿದ್ದಾರೆ.
3 ವರ್ಷಗಳಿಂಗ ಇಸಿಸ್ ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಮೊಸುಲ್ ನಲ್ಲಿ ಇರಾಕ್ ಸೇನೆ ಮತ್ತು ಇಸಿಸ್ ಮಧ್ಯೆ ಯುದ್ಧ ನಡೆದಿತ್ತು. ಮೊಸುಲ್ ಪಟ್ಟಣವನ್ನು ವಶಪಡಿಸಿಕೊಂಡಿರುವ ಚಿತ್ರವೊಂದನ್ನು ಅಬಾಡಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.
2014ರಲ್ಲಿ ಇಸಿಸ್ ಉಗ್ರ ಸಂಘಟನೆ ಮೊದಲ ಬಾರಿಗೆ ಮೊಸುಲ್ ನಗರವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ನಂತರ ಈ ಭಾಗದಲ್ಲಿ ಖಲೀಫ ಸಾಮ್ರಾಜ್ಯ ಸ್ಥಾಪನೆಯ ಘೋಷಣೆ ಮಾಡಿತ್ತು. ಆದರೆ, ಅಮೆರಿಕ ನೇತೃತ್ವದ ಒಕ್ಕೂಟ ದಾಳಿ ಆರಂಭಿಸಿದ ನಂತರದಲ್ಲಿ ಇಸಿಸ್ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಪ್ರದೇಶಗಳನ್ನು ಕಳೆದುಕೊಂಡಿದ್ದು ಇತಿಹಾಸವಾಗಿದೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಇರಾಕ್ ಕಳೆದ ಜನವರಿ ತಿಂಗಳಿನಲ್ಲಿ ಪೂರ್ವ ಮೊಸುಲ್ ನ್ನು ವಶಕ್ಕೆ ಪಡೆದುಕೊಂಡಿತ್ತು. ಇದಾದ ಬಳಿಕ ನಿನ್ನೆ ಮೊಸುಲ್ ನಗರವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡಿರುವುದಾಗಿ ಘೋಷಣೆ ಮಾಡಿದೆ.
ಉಗ್ರರ ಕಪಿಮುಷ್ಠಿಯಲ್ಲಿದ್ದ ಮೊಸುಲ್ ನ್ನು ವಿಮೋಚನೆಗೊಳಿಸುವ ಉದ್ದೇಶದಿಂದ 2016ರ ಸೆಪ್ಟೆಂಬರ್ 23ರಲ್ಲಿ ಸೇನಾ ಸಹಕಾರದೊಂದಿಗೆ ಒಪ್ಪಂದಗಳು ಏರ್ಪಟ್ಟಿತ್ತು. ಇದರ ಅನ್ವಯ ಅಮೆರಿಕ ಮತ್ತು ಮೈತ್ರಿ ರಾಷ್ಟ್ರಗಳು ಇರಾಕ್ ಸೇನಾ ಪಡೆಗಳಿಗೆ ತರಬೇತಿ ನೀಡಿದ್ದವು.
ಪ್ರತಿ ಸೇನಾ ಪಡೆಯಲ್ಲಿ 2 ಸಾವಿರ ಮಂದಿ ಇದ್ದ 11 ಇರಾಕ್ ಸೇನೆ ಹಾಗೂ ವಿಶೇಷ ಸೇನಾ ಪಡೆಗಳು ಯುದ್ಧ ಭೂಮಿಗೆ ಇಳಿದಿದ್ದವು. ಇದರ ಜೊತೆಗೆ ಕಠಿಣ ಸಂದರ್ಭಗಳಲ್ಲಿ ಇರಾಕ್ ಸೇನೆಯ ಸಹಾಕಯಕ್ಕಾಗಿ ನೂರಾರು ಸಂಖ್ಯೆಯಲ್ಲಿ ಅಮೆರಿಕದ ಸೇನಾ ಪಡೆಗಳು ಇರಾಕ್ ತೆರಳಿದ್ದವು.
ಇರಾಕ್ ರಾಜಕೀಯ ಸ್ಥಿರತೆ ಹಾಗೂ ಜಾಗತಿಕವಾಗಿ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉಗ್ರರನ್ನು ಸದೆಬಡಿಯುವುದು ಹಾಗೂ ಮೊಸುಲ್ ನಗರವನ್ನು ಮರಳಿ ವಶಕ್ಕೆ ಪಡೆದುಕೊಳ್ಳುವುದು ಇರಾಕ್ ಗೆ ಪ್ರತಿಷ್ಠೆಯ ವಿಷಯವಾಗಿತ್ತು.
ಮೊಸುಲ್ ನಂತರ ಉಗ್ರರು ಸಣ್ಣಪುಟ್ಟ ಪಟ್ಟಣಗಳನ್ನು ಹಿಡಿತಕ್ಕೆ ಪಡೆದುಕೊಂಡಿದ್ದರು. ಅಲ್ಲಿಂದ ಅಪಾರ ಪ್ರಮಾಣದ ಸಂಪತ್ತನ್ನು ಲೂಡಿ ಮಾಡುತ್ತಿದ್ದರು. ಪ್ರಸ್ತುತ ಇರಾಕ್ ಸೇನೆ ನಡೆಸಿರುವ ಕಾರ್ಯಾಚರಣೆಯಿಂದಾಗಿ ಬಹುತೇಕ ಇಸಿಸ್ ಉಗ್ರರ ಚಟುವಟಿಕೆಗಳು ಅಂತ್ಯಗೊಂಡಿದೆ ಎಂದು ಹೇಳಲಾಗುತ್ತಿದೆ.