ನವದೆಹಲಿ/ದುಬೈ: ಸೌದಿ ಅರೇಬಿಯಾದ ದಕ್ಷಿಣ ಪ್ರಾಂತ್ಯದ ನಜ್ರಾನ್ ಪಟ್ಟಣದಲ್ಲಿರುವ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 10 ಮಂದಿ ಭಾರತೀಯರು ಮೃತಪಟ್ಟಿರುವುದಾಗಿ ಗುರುವಾರ ತಿಳಿದುಬಂದಿದೆ.
ಕಿಟಕಿಗಳಿಲ್ಲದ ಮನೆಯೊಂದರಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ ಪರಿಣಾಮ ಹಲವು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ದುರಂತ ನಡೆದ ಸ್ಥಳಕ್ಕೆ ಈಗಾಗಲೇ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತೆರಳಿದ್ದಾರೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.
ಅಗ್ನಿ ದುರಂತ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್ ಅವರು, ನಜ್ರಾನ್ ನಲ್ಲಿ ಸಂಭವಿಸಿರುವ ಅಗ್ನಿ ದುರಂತ ಅರಿವಿಗೆ ಬಂದಿದೆ. ಘಟನೆಯಲ್ಲಿ 10 ಮಂದಿ ಭಾರತೀಯರನ್ನು ನಾವು ಕಳೆದುಕೊಂಡಿದ್ದೇವೆ. 6 ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಿದ್ದಾರೆ.
ಘಟನೆ ಕುರಿತಂತೆ ಜೆಡ್ಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಜೆಡ್ಡಾದಿಂದ ನಜ್ರಾನ್ 900 ಕಿಮೀ ದೂರದಲ್ಲಿದ್ದು, ವಿಮಾನದ ಮೂಲಕ ನಮ್ಮ ಅಧಿಕಾರಿಗಳು ನಜ್ರಾನ್'ಗೆ ತೆರಳಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ನಜ್ರಾನ್ ರಾಜ್ಯಪಾಲರೊಂದಿಗೆ ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics