ವಿದೇಶ

ಉತ್ತರ ಕೊರಿಯಾದೊಂದಿಗಿನ ರಾಜತಾಂತ್ರಿಕ ಸಂಬಂಧ ಮೊಟಕುಗೊಳಿಸಿ: ಭಾರತಕ್ಕೆ ಅಮೆರಿಕ ಸಲಹೆ

Srinivasamurthy VN

ನವದೆಹಲಿ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧ ತೊಡೆ ತಟ್ಟಿರುವ ಅಮೆರಿಕ ಇದೀಗ ತನ್ನ ಹೋರಾಟಕ್ಕೆ ಜಾಗತಿಕ ಬೆಂಬಲ ಕೋರಿದ್ದು, ಇದೀಗ ಭಾರತ ಕೂಡ ಉತ್ತರಕೊರಿಯಾದೊಂದಿಗಿನ ತನ್ನ  ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿಕೊಳ್ಳುವಂತೆ ಸಲಹೆ ನೀಡಿದೆ.

ಸತತ ಅಣ್ವಸ್ತ್ರ ಮತ್ತು ಕ್ಷಿಪಣಿ ಪರೀಕ್ಷೆಗಳ ಹಿನ್ನಲೆಯಲ್ಲಿ ಉತ್ತರ ಕೊರಿಯಾ ವಿರುದ್ಧ ವಿಶ್ವಸಂಸ್ಥೆ ಹೇರಿರುವ ದಿಗ್ಬಂಧನವನ್ನು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಧಿಕ್ಕರಿಸಿರುವ ಬೆನ್ನಲ್ಲೇ ಉತ್ತರ ಕೊರಿಯಾ ಮೇಲೆ ಹೊಸ  ದಿಗ್ಬಂಧನಗಳನ್ನು ಹೇರಲು ಅಮೆರಿಕ ಸಿದ್ಧತೆ ನಡೆಸಿಕೊಂಡಿದೆ. ಅದರಂತೆ ಈಗಾಗಲೇ ಚೀನಾದೊಂದಿಗೆ ಮಾತುಕತೆ ನಡೆಸಿರುವ ಭಾರತ ಇತರೆ ದೇಶಗಳ ನೆರವನ್ನೂ ಕೂಡ ಕೇಳುತ್ತಿದೆ. ಇದಪ ಮುಂದುವರೆದ ಭಾಗವೆಂಬಂತೆ   ಅಮೆರಿಕದ ರಕ್ಷಣಾ ವಿಭಾಗದ ನಿಯೋಗ ದೆಹಲಿಗೆ ಭೇಟಿ ಮಾಡಿ ಈ ನಿಟ್ಟಿನಲ್ಲಿ ಹೆಚ್ಚಿನ ಸಹಕಾರ ನೀಡುವಂತೆ ಭಾರತಕ್ಕೆ ಮನವಿ ಮಾಡಿದೆ ಎಂದು ಹೇಳಲಾಗಿದೆ.

ಅಂತೆಯೇ ಉತ್ತರ ಕೊರಿಯಾ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಮೊಟಕುಗೊಳಿಸುವಂತೆ ಅಮೆರಿಕ ಭಾರತವನ್ನು ಆಗ್ರಹಿಸಿದೆ.

ಉತ್ತರ ಕೊರಿಯಾ ಕಳೆದ ಶುಕ್ರವಾರ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ವಿನಾಶಕಾರಿ ಖಂಡಾಂತರ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಿತ್ತು. ಈ  ಹಿನ್ನೆಲೆಯಲ್ಲಿ, ಅಮೆರಿಕ ಹಾಗೂ ಇತರ ದೇಶಗಳು ಉತ್ತರ ಕೊರಿಯಾ ಕ್ರಮವನ್ನು  ಟೀಕಿಸಿದ್ದವು. ಇದಕ್ಕೂ ಮೊದಲು ಉತ್ತರ ಕೊರಿಯಾ ನಡೆಸಿದ ಕ್ಷಿಪಣಿ ಪರೀಕ್ಷೆಯಿಂದಾಗಿ ಕ್ಷಿಪಣಿಯೊಂದು ಜಪಾನ್ ಸಮುದ್ರ ಗಡಿಯಲ್ಲಿ ಬಿದ್ದಿತ್ತು. ಈ ಬಗ್ಗೆ ಜಪಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು,

ಇನ್ನು ಮೊನ್ನೆ ಉತ್ತರ ಕೊರಿಯಾ ಪರೀಕ್ಷಿಸಿದ ಹೊಸ ಐಸಿಬಿಎಂ ಕ್ಷಿಪಣಿ ಅಮೆರಿಕದ ಪ್ರಮುಖ ನಗರಗಳ ಮೇಲೂ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ.

ಭಾರತದಿಂದ ಉತ್ತರ ಕೊರಿಯಾಕ್ಕೆ 110 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳು ರಫ್ತಾಗುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ದ್ವಿಪಕ್ಷೀಯ ವ್ಯಾಪಾರ ಶೇಕಡ 30ರಷ್ಟು ಕುಸಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉತ್ತರ  ಕೊರಿಯಾದ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿರುವ ಚೀನಾ, ಆ ದೇಶದ ಜತೆಗಿನ ವಹಿವಾಟನ್ನು ಹೆಚ್ಚಿಸಿಕೊಂಡಿದೆ.

SCROLL FOR NEXT