ಪಾಕಿಸ್ತಾನಿ ಮಗು- ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ಪಾಕಿಸ್ತಾನದಲ್ಲಿ ಜನಿಸಿದ ಮಗುವೊಂದಕ್ಕೆ ಹೃದಯ ಸಂಬಂಧಿ ಸಮಸ್ಯೆ ಎದುರಾಗಿತ್ತು. ತಕ್ಷಣವೇ ಮಗುವಿನ ತಂದೆ ಕೆನ್ ಸಿದ್ ಪಾಕಿಸ್ತಾನ ವಿದೇಶಾಂಗ ಇಲಾಖೆ ಅಧಿಕಾರಿ ಸರ್ತಾಜ್ ಅಜೀಜ್ ಹಾಗೂ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ, ವೈದ್ಯಕೀಯ ವೀಸಾಗಾಗಿ ಮನವಿ ಮಾಡಿದ್ದಾರೆ.
ಮೇ.24 ರಂದು ಟ್ವೀಟ್ ಮಾಡಿದ್ದ ಕೆನ್ ಸಿದ್, ತಮ್ಮ 2 ವರೆ ತಿಂಗಳ ಮಗು ರೋಹಾನ್ ನ ಫೋಟೋವನ್ನು ಟ್ವಿಟರ್ ನಲ್ಲಿ ಹಾಕಿ ಟ್ವೀಟ್ ಮಾಡಿದ್ದು, ನನ್ನ ಮಗು ಏಕೆ ವೈದ್ಯಕೀಯ ಚಿಕಿತ್ಸೆ ಪಡೆಯದೇ ಸಮಸ್ಯೆ ಎದುರಿಸಬೇಕು, ಉತ್ತರವಿದೆಯಾ? ಎಂದು ಪ್ರಶ್ನಿಸಿದ್ದಾರೆ. ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವಾರಜ್ ನಿಮ್ಮ ಮಗು ಸಮಸ್ಯೆ ಎದುರಿಸುವುದಿಲ್ಲ. ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ನ್ನು ಸಂಪರ್ಕಿಸಿ, ವೈದ್ಯಕೀಯ ವೀಸಾಗೆ ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕೆನ್ ಸಿದ್ ಜೊತೆಗೆ ರವಿ ಕುಮಾರ್ ಎಂಬುವವರೂ ಸುಷ್ಮಾ ಸ್ವರಾಜ್ ಅವರಿಗೆ ಈ ವಿಷಯದ ಬಗ್ಗೆ ಪತ್ರ ಬರೆದು ಚಿಕಿತ್ಸೆ ಕೊಡಿಸುವುದಕ್ಕೆ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದರು.
ಸುಷ್ಮಾ ಸ್ವರಾಜ್ ಅವರ ಸಹಾಯವನ್ನು ಮೆಚ್ಚಿರುವ ಪಾಕಿಸ್ತಾನದ ಕೆನ್ ಸಿದ್, ಮ್ಯಾಮ್ ನನಗೆ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ನನ್ನ ಮಗನಿಗೆ ಮಾಡಿದ ಸಹಾಯಕ್ಕಾಗಿ ನಾನು ನಿಮಗೆ ಕೃತಜ್ಞರಾಗಿರುತ್ತೇನೆ, ಭಾರತ ಸರ್ಕಾರವನ್ನು ಗೌರವಿಸುತ್ತೇನೆ ಜೈ ಹಿಂದ್ ಎಂದು ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.