ನರೇಂದ್ರ ಮೋದಿ-ಕ್ಸಿ ಜಿನ್ಪಿಂಗ್ (ಸಂಗ್ರಹ ಚಿತ್ರ)
ಅಸ್ತಾನಾ: ಕಜಕಿಸ್ತಾನದ ಆಸ್ತಾನಾದಲ್ಲಿ ಆರಂಭವಾಗಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ- ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಾತನಾಡಿದ್ದು, ಭಾರತ ಹಾಗೂ ಚೀನಾ ಪರಸ್ಪರ ಹಿತಾಸಕ್ತಿಗಳನ್ನು ಗೌರವಿಸಬೇಕೆಂದು ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ಸಲಹೆ ನೀಡಿದ್ದಾರೆ.
ಎನ್ಎಸ್ ಜಿ ಸದಸ್ಯತ್ವ, ಸಿಪಿಸಿ ಸೇರಿದಂತೆ ಭಾರತ-ಚೀನಾ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದು ಬಿಆರ್ ಐ ಸಭೆಗೆ ಭಾರತ ಗೈರು ಹಾಜರಾದ ನಂತರ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷರಿಗೆ ಸಲಹೆ ನೀಡಿದ್ದು, ಉಭಯ ರಾಷ್ಟ್ರಗಳೂ ಸಹಕಾರದ ವಿಷಯದಲ್ಲಿ ತಮ್ಮ ಸಾಮರ್ಥ್ಯದ ಲಾಭವನ್ನು ಪಡೆಯಬೇಕು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಸಂವಹನ ಹಾಗೂ ಸಹಕಾರವನ್ನು ವೃದ್ಧಿಸಿಕೊಂಡು ಪರಸ್ಪರ ಹಿತಾಸಕ್ತಿಗಳನ್ನು ಗೌರವಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ನಮಗೆ ನಮ್ಮ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಅರಿವಿದೆ, ಭಿನ್ನಾಭಿಪ್ರಾಯಗಳು ವಿವಾದವಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದ್ದಾರೆ.