ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್
ಬೀಜಿಂಗ್: ಉಗ್ರರಲ್ಲಿ ಒಳ್ಳೆಯವರು, ಕೆಟ್ಟವರು ಎಂಬುದಿರುವುದಿಲ್ಲ. ಎಲ್ಲರೂ ಕ್ರಿಮಿನಲ್ ಗಳೇ ಆಗಿರುತ್ತಾರೆ. ವಿಶ್ವ ಸಮುದಾಯದ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಬೇಕಿದೆ ಎಂದು ಉದಯೋನ್ಮುಖ ಆರ್ಥಿಕ ಶಕ್ತಿಗಳ ಕೂಟವಾಗಿರುವ ಬ್ರಿಕ್ಸ್ ದೇಶಗಳ ಸಭೆಯಲ್ಲಿ ಭಾರತ ಹೇಳಿದೆ.
ಬ್ರಿಕ್ಸ್ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಅವರು, ಭಯೋತ್ಪಾದನೆ ಮನುಕುಲದ ಶತ್ರು ಎಂಬುದನ್ನು ಎಲ್ಲರೂ ಒಪ್ಪಿದ್ದಾರೆ. ಭಯೋತ್ಪಾದನೆ ಬೆದರಿಕೆಗಳ ಬಗ್ಗೆ ಪ್ರತೀಯೊಬ್ಬರು ಚಿಂತಿಸುತ್ತಾರೆ. ಹೀಗಾಗಿ ವಿಶ್ವ ಸಮುದಾಯದ ಮಟ್ಟದಲ್ಲಿ ಅಂತರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಯುಸುತ್ತಿದ್ದೇವೆ. ಈಗಾಗಲೇ ಬ್ರಿಕ್ಸ್ ರಾಷ್ಟ್ರಗಳ ಸದಸ್ಯರೂ ಕೂಡ ಇದಕ್ಕೆ ಬೆಂಬಲ ನೀಡಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ಗಡಿ ಭಯೋತ್ಪಾದನೆ ಕುರಿತ ಪ್ರಶ್ನೆಗೆ ಉತ್ತರಿಸುವ ಅವರು, ಭಯೋತ್ಪಾದನೆ ಜಾಗತಿಕ ಪಿಡುಗು ಎಂದು ಭಾರತ ಈ ಹಿಂದಿನಿಂದಲೂ ಹೇಳುತ್ತಲೇ ಬಂದಿದೆ. ಉಗ್ರರನ್ನು ಒಳ್ಳೆಯವರು, ಕೆಟ್ಟವರು ಎಂಬು ವಿಭಾಗಿಸಬಾರದು. ಉಗ್ರತ್ವ ಪಾಲನೆ ಮಾಡುವವರೆಲ್ಲರೂ ಕ್ರಿಮಿನಲ್ ಗಳಾಗಿರುತ್ತಾರೆ. ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಮಟ್ಟ ಹಾಕಬೇಕೆಂದು ತಿಳಿಸಿದ್ದಾರೆ.