ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.24 ರಿಂದ ವಿದೇಶ ಪ್ರವಾಸ ಕೈಗೊಂಡಿದ್ದು, ಜೂ.25-26 ರಂದು ಅಮೆರಿಕ ಪ್ರವಾಸದಲ್ಲಿರಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಶ್ವೇತ ಭವನದಲ್ಲಿ ಭೋಜನ ಸವಿಯುವ ಕಾರ್ಯಕ್ರಮ ನಿಗದಿಯಾಗಿದ್ದು, ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಭೋಜನ ಸವಿಯುವ ವಿಶ್ವದ ಮೊದಲ ನಾಯಕ ನರೇಂದ್ರ ಮೋದಿಯವರಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯನ್ನು ವಿಶೇಷವಾಗಿಸಲು ಶ್ವೇತ ಭವನ ತಯಾರಿ ನಡೆಸಿದ್ದು, " ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪು ಹಾಸಿನ ಸ್ವಾಗತ ದೊರೆಯಲಿದೆ, ಅಷ್ಟೇ ಅಲ್ಲದೇ ಇಬ್ಬರೂ ನಾಯಕರು ಶ್ವೇತ ಭವನದಲ್ಲಿ ನಡೆಯಲಿರುವ ವ್ಯವಹಾರಿಕ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ವಿದೇಶದ ನಾಯಕರೊಬ್ಬರು ಟ್ರಂಪ್ ಅವರೊಂದಿಗೆ ಶ್ವೇತ ಭವನದಲ್ಲಿ ಔತಣ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ವಿಶೇಷವಾಗಿದೆ ಎಂದು ಶ್ವೇತ ಭವನದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.