ವಿದೇಶ

ಟ್ರಂಪ್-ಮೋದಿ ಭೇಟಿ ವೇಳೆ ವೀಸಾ ವಿಷಯ ಚರ್ಚೆಯಾಗಿಲ್ಲ: ವಿದೇಶಾಂಗ ಕಾರ್ಯದರ್ಶಿ

Srinivas Rao BV
ವಾಷಿಂಗ್ ಟನ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದ ವೇಳೆ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆ ವೇಳೆ ಹೆಚ್ 1 ಬಿ ವೀಸಾ ಬಗ್ಗೆಯೂ ಚರ್ಚೆ ನಡೆಯಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಈ ಬಗ್ಗೆ ಉಭಯ ನಾಯಕರ ನಡುವೆ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ. 
ಭಾರತೀಯ ಐಟಿ ಉದ್ಯೋಗಿಗಳು ಹೆಚ್ಚು ಬಳಸುವ ಹೆಚ್-1 ಬಿ ವೀಸಾ ನೀತಿಗಳನ್ನು ಟ್ರಂಪ್ ಸರ್ಕಾರ ಮರುಪರಿಶೀಲಿಸಿದ್ದು, ದ್ವಿಪಕ್ಷೀಯ ಮಾತುಕತೆ ವೇಳೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್, ಉಭಯ ನಾಯಕರು ಡಿಜಿಟಲ್ ಪಾಲುದಾರಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಆದರೆ ಹೆಚ್ 1 ಬಿ ವೀಸಾ ಕುರಿತು ಮಾತುಕತೆಯಾಗಲೀ ಪ್ರಸ್ತಾಪವಾಗಲಿ ಆಗಿಲ್ಲ ಎಂದು ಹೇಳಿದ್ದಾರೆ. 
ಯಾವುದೇ ಹಿತಾಸಕ್ತಿಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರೆ ಅದರ ಬಗ್ಗೆ ಖಂಡಿತವಾಗಿಯೂ ಗಮನ ಹರಿಸಲಾಗುತ್ತದೆ. ಆದ್ದರಿಂದ ಮಾತುಕತೆಯ ವೇಳೆ ವೀಸಾ ಅಂಶ ನಿರ್ದಿಷ್ಟವಾಗಿ ಚರ್ಚೆಯಾಗದಿದ್ದರೂ ಆ ಬಗ್ಗೆ ಎರಡು ಸರ್ಕಾರಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತವೆ ಎಂಬ ಅರ್ಥದಲ್ಲಿ ಜೈಶಂಕರ್ ಹೇಳಿಕೆ ನೀಡಿದ್ದಾರೆ. 
ಅಮೆರಿಕ-ಭಾರತ ಬಾಂಧವ್ಯವನ್ನು ನಿರ್ಮಿಸಲು ಭಾರತೀಯ-ಅಮೆರಿಕನ್ ಸಮುದಾಯ ನಿರ್ವಹಿಸಿರುವ ಪ್ರಮುಖ ಪಾತ್ರವನ್ನು ಗುರುತಿಸಲಾಗುತ್ತದೆ. ಭಾರತೀಯ-ಅಮೆರಿಕನ್ನರು ಸಿಲಿಕಾನ್ ವ್ಯಾಲಿಯ ಟೆಕ್ನಾಲಜಿ ಕ್ರಾಂತಿಗೆ ಕೊಡುಗೆ ನೀಡಿ ಮುಂಚೂಣಿಯಲ್ಲಿದ್ದು, ಸಿಲಿಕಾನ್ ವ್ಯಾಲಿಯ ಸ್ಟಾರ್ಟ್ ಅಪ್ ಗಳಲ್ಲಿ ಶೇ.15 ರಷ್ಟು ಸ್ಟಾರ್ಟ್ ಅಪ್ ಗಳನ್ನು ಹೊಂದಿದ್ದಾರೆ. ಯಾವುದೆಕ್ಕೆ ಬೆಲೆ ನೀಡುತ್ತೇವೆಯೋ ಅದಕ್ಕೆ ಸಂಬಂಧಿಸಿದ ಹಿತಾಸಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಕೆಲಸ ನಡೆಯುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ.
ವೀಸಾ ಅರ್ಜಿ ಹಾಗೂ ವೀಸಾ  ನೀಡುವುದಕ್ಕೆ ಸಂಬಂಧಿಸಿದಂತೆ ತಕ್ಷಣಕ್ಕೆ ಯಾವುದೇ ಬದಲಾವಣೆಗಳಿಲ್ಲ. ಆದ್ದರಿಂದ ಈ ಹಂತದಲ್ಲೇ ವೀಸಾ ನಿಯಮಗಳ ಪರಿಶೀಲನೆಯ ಫಲಿತಾಂಶವನ್ನು ಅಂದಾಜಿಸುವುದು ಸಾಧ್ಯವಿಲ್ಲ ಎಂದಿದ್ದಾರೆ ಜೈಶಂಕರ್.
SCROLL FOR NEXT