ಢಾಕಾ: ಬಾಂಗ್ಲಾದೇಶದ ಶಂಕಿತ ಉಗ್ರಗಾಮಿ ಅಡಗುತಾಣದ ಮೇಲೆ ದಾಳಿ ಮಾಡಿರುವ ಬಾಂಗ್ಲಾ ಪೊಲೀಸರು ಮೂವರು ಮಹಿಳೆಯನ್ನು ಬಂಧಿಸಿರುವುದಲ್ಲದೆ, ಶಸ್ತ್ರಾಸ್ತ್ರಗಳು, ಬಂಧೂಕುಗಳು, ಆತ್ಮಹತ್ಯಾ ಬಾಂಬ್ ಸ್ಫೋಟಕ ಕವಚಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ನಿಯೋ ಜೆಎಂಬಿ ಉಗ್ರ ಅಡುಗುತಾಣ ಎಂದು ಶಂಕಿಸಲಾಗಿತ್ತು.
ಪೊಲೀಸ್ ಸೂಪರಿಂಟೆಂಡೆಂಟ್ ಎಸ್ ಎಂ ಮೆಹದಿ ಹುಸೇನ್ ಅವರು ಕೊಟ್ಟಿರುವ ಮಾಹಿತಿಯ ಪ್ರಕಾರ ಶನಿವಾರ ಬೆಳಗ್ಗೆ ೧೨ ಘಂಟೆಯ ಹೊತ್ತಿಗೆ ಉಪಜಿಲ ಪಟ್ಟಣದ ತಲತೋಳ ಮಸೀದಿ ಬಳಿಯ ಮನೆಯೊಂದನ್ನು ಸುತ್ತುವರಿಯಲಾಯಿತು. ಬೆಳಗ್ಗೆ ೩ ಘಂಟೆಯ ಹೊತ್ತಿಗೆ ಆತ್ಮಹತ್ಯಾ ಬಾಂಬ್ ಕವಚ ತೊಟ್ಟ ಮಹಿಳೆಯೊಬ್ಬರು ಪೋಲೀಸರ ಮೇಲೆ ದಾಳಿ ನಡೆಸಿದರು. "ಅದು ಸ್ಫೋಟಗೊಳ್ಳುವ ಮುಂಚಿತವಾಗಿಯೇ ತಡೆಯಲಾಯಿತು. ನಂತರ ಇನ್ನಿಬ್ಬರನ್ನು ಬಂಧಿಸಲಾಯಿತು" ಎಂದು ಅವರು ಹೇಳಿದ್ದಾರೆ.
ಈ ಮಹಿಳೆಯನ್ನು ತಿಥಿ ಎಂದು ಗುರುತಿಸಲಾಗಿದ್ದು, ಇವರು ನಿಯೋ ಜೆಎಂಬಿ ಮುಖಂಡ ಅಯೂಬ್ ಬಚ್ಚು ಶೊಜಿಬ್ ಅವರ ಪತ್ನಿ. ಮತ್ತಿಬ್ಬರು ಸೌಮೈಯ ಮತ್ತು ತೋಳಿ ಬೇಗಮ್ ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಇನ್ನು ಹೆಚ್ಚಿನ ಸ್ಫೋಟಕಗಳು ಅಡಗಿರಬಹುದಾದ ಶಂಕೆಯಿಂದ ಹತ್ತಿರದ ಮನೆಗಳ ನಾಗರಿಕರನ್ನು ಸ್ಥಳಾಂತರಗೊಳಿಸಲಾಗಿದೆ. ಢಾಕಾದಿಂದ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಲಾಗಿದೆ.