ಸ್ಯಾನ್ ಜೋಸ್ ಪಿನುಲಾ: ಗ್ವಾಟೆಮಾಲಾದಲ್ಲಿರುವ ನಿರಾಶ್ರಿತ ಶಿಬಿರದಲ್ಲಿ ಬೆಂಕಿ ಸಂಭವಿಸಿದ ಕಾರಣ ಕನಿಷ್ಟ 21 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನಿರಾಶ್ರಿತ ಶಿಬಿರದಲ್ಲಿರುವ ಮಹಿಳಾ ವಿಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಪರಿಣಾಮ ಅಲ್ಲಿದ್ದ ಸುಮಾರು 21 ಮಂದಿ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಶಿಬಿರದ ಮೂಲಭೂತ ಸೌಕರ್ಯಗಳ ಕುರಿತಂತೆ ಅಲ್ಲಿದ್ದ ಕೆಲ ಯುವಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಸಂಭವಿಸಿದ ಘರ್ಷಣೆ ವೇಳೆ ಉದ್ರಿಕ್ತರ ಗುಂಪು ಶಿಬಿರಕ್ಕೆ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಈ ವೇಳೆ ಬೆಂಕಿ ಅಪಾರ ಪ್ರಮಾಣದಲ್ಲಿ ವ್ಯಾಪಿಸಿ ಶಿಬಿರದಲ್ಲಿದ್ದವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಶಿಬಿರಿದಲ್ಲಿ ಹತ್ತಿಯಿಂದ ಮಾಡಲಾಗಿದ್ದ ಬೆಡ್ ಗಳು, ಕೊಠಡಿಗಳಿಗೆ ಮರದ ಶೀಟ್ ಗಳನ್ನು ಅಳವಡಿಸಿದ್ದರಿಂದ ಬೆಂಕಿ ಕೆನ್ನಾಲಿಗೆ ವ್ಯಾಪಕವಾಗಿ ಆವರಿಸಿದ್ದು, ಇದೇ ಕಾರಣಕ್ಕೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಶಂಕೆ ವ್ಯಕ್ತವಾಗುತ್ತಿದೆ. ಮೂಲಗಳ ಪ್ರಕಾರ ಈ ಶಿಬಿರದಲ್ಲಿ 500 ಬೆಡ್ ಗಳ ಸಾಮರ್ಥ್ಯವಿದ್ದು, ಆದರೆ ಇಲ್ಲಿ 800ಕ್ಕೂ ಹೆಚ್ಚು ಮಂದಿಯನ್ನು ಇಡಲಾಗಿತ್ತು. ಇದೇ ಕಾರಣಕ್ಕೆ ಜಾಗ ಸಾಲದೇ ಯುವಕರ ನಡುವೆ ಘರ್ಷಣೆ ಏರ್ಪಟ್ಟಿತ್ತು ಎಂದು ಹೇಳಲಾಗುತ್ತಿದೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗ್ವಾಟೆಮಾಲಾ ಸರ್ಕಾರ ಕ್ರಿಮಿನಲ್ ಹಿನ್ನಲೆಯುಳ್ಳ ಯುವಕರನ್ನು ಶಿಬಿರದಿಂದ ಹೊರಹಾಕುವಂತೆಯೂ ಮತ್ತು ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ