ವಿದೇಶ

ಸೇನಾ ಕಾರ್ಯಾಚರಣೆಗೆ ಹೆದರಿ ತಮ್ಮನ್ನು ತಾವೇ ಸ್ಫೋಟಿಸಿಕೊಂಡ 3 ಉಗ್ರರು

Srinivasamurthy VN

ಢಾಕಾ: ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದ ಸೈನಿಕರಿಗೆ ಹೆದರಿ ಅಡಗಿ ಕುಳಿತಿದ್ದ ಮೂವರು ಉಗ್ರರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿರುವ ಘಟನೆ ಗುರುವಾರ ಬಾಂಗ್ಲಾದೇಶದಲ್ಲಿ ನಡೆದಿದೆ.

ಬಾಂಗ್ಲಾದೇಶದ ಸೀತಾಕುಂಡ್ ಜಿಲ್ಲೆಯ ಚಿತ್ತಗಾಂಗ್ ನಲ್ಲಿ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಮೂವರ ಉಗ್ರರು ಹತರಾಗಿದ್ದಾರೆ. ಸ್ವಾಟ್ (Crime unit, Special Weapon and Tactic Team) ಮತ್ತು ರ‍್ಯಾಪಿಡ್  ಆ್ಯಕ್ಷನ್ ಬೆಟಾಲಿಯನ್ ತಂಡಗಳ ಜಂಟಿ ಕಾರ್ಯಾಚರಣೆ ವೇಳೆ ಸೀತಾಕುಂಡ್ ನ ಚಿತ್ತಗಾಂಗ್ ನಲ್ಲಿ ಮೂವರು ಉಗ್ರರು ಅಡಗಿ ಕುಳಿತಿದ್ದರು. ಈ ವೇಳೆ ಉಗ್ರರ ಇರುವಿಕೆಯನ್ನು ಪತ್ತೆ ಮಾಡಿದ ಬಾಂಗ್ಲಾದೇಶ ಸೈನಿಕರು,  ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ಉಗ್ರರು ತಮ್ಮ ಬಳಿ ಇರುವ ಸ್ಫೋಟಗಳನ್ನು ಸ್ಫೋಟಿಸಿದ್ದಾರೆ. ಪರಿಣಾಣ ಅಡಗಿ ಕುಳಿತಿದ್ದ ಎಲ್ಲ ಉಗ್ರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದಿ ಆಪರೇಷನ್ ಅಸ್ಸಾಲ್ಟ್ 16 ಹೆಸರಿನಲ್ಲಿ ಬಾಂಗ್ಲಾ ಸೈನಿಕರು ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಉಗ್ರರು ಕಟ್ಟಡ 2ನೇ ಅಂತಸ್ತಿನಲ್ಲಿ ಅಡಗಿ ಕುಳಿತು ಸೈನಿಕರತ್ತ ಗುಂಡು  ಹಾರಿಸುತ್ತಿದ್ದರು. ಪ್ರತಿ ದಾಳಿ ನಡುವೆಯೇ ಸೈನಿಕರು ಕಟ್ಟಡ ಸುತ್ತುವರೆದು ಕಟ್ಟಡ ಒಳ ಪ್ರವೇಶಿಸಲು ಮುಂದಾದರು. ಈ ವೇಳೆ ಸಿಕ್ಕಿ ಬೀಳುವ ಆತಂಕದಿಂದ ಉಗ್ರರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ ಎಂದು ಸೇನಾ  ಮೂಲಗಳು ತಿಳಿಸಿವೆ.

ಮೃತ ಉಗ್ರರು ನಿಷೇಧಿತ ನಿಯೋ ಜಮಾತುಲ್ ಮುಜಾಹಿದ್ದೀನ್ ಬಾಂಗ್ಲಾದೇಶ ಉಗ್ರ ಸಂಘಟನೆಗೆ ಸೇರಿದ ಉಗ್ರರು ಎಂದು ಹೇಳಲಾಗುತ್ತಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು  ತಿಳಿದುಬಂದಿದೆ.

ಪ್ಯಾರಿಸ್ ದಾಳಿ ಮಾದರಿಯಲ್ಲಿ ದಾಳಿಗೆ ಸಂಚು ರೂಪಿಸಿದ್ದ ಉಗ್ರರು ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಶೇಖರಿಸಿ ಬಳಿಕ ದಾಳಿ ನಡೆಸಿದ್ದರು. ಉಗ್ರರು ತಾವು ಅಡಗಿಕೊಂಡಿದ್ದ ಈ ಕಟ್ಟಡದಲ್ಲಿ ಹಲವು ಮಂದಿಯನ್ನು  ಹಿಂದಿನ ರಾತ್ರಿ ಪೂರ್ತಿ ತಮ್ಮ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಪೊಲೀಸ್‌ ಕಾಯಾರಚರಣೆಗೆ 10 ನಿಮಿಷ ಮುನ್ನ ಅವರನ್ನು ಉಗ್ರರು ಬಿಡುಗಡೆ ಮಾಡಿದ್ದರು ಎಂದು ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

SCROLL FOR NEXT