ರಿಯಾದ್: ಸೌದಿ ಅರೇಬಿಯಾಗೆ ಅಕ್ರಮವಾಗಿ ವಲಸೆ ಹೋಗಿದ್ದ ಸಾವಿರಾರು ಭಾರತೀಯರಿಗೆ ಅಲ್ಲಿನ ಸರ್ಕಾರ 90 ದಿನಗಳ ಕ್ಷಮಾದಾನ ಗಡುವು ನೀಡಿದ್ದು, 20,000 ಅಕ್ರಮ ವಲಸಿಗರು ಭಾರತಕ್ಕೆ ವಾಪಸ್ಸಾಗಲಿದ್ದಾರೆ.
ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಅನಿಲ್ ನೌತಿಯಾಲ್ ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, 20,321 ಭಾರತೀಯರು ದೇಶಕ್ಕೆ ವಾಪಾಸ್ಸಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಪೈಕಿ 1,500 ಬ್ಲೂ ಕಾಲರ್ ಕೆಲಸಗಾರರು ತಮಿಳುನಾಡಿನ ಮೂಲದವರಾಗಿದ್ದು, ಕ್ಷಮಾದಾನದ ಯೋಜನೆಯಡಿ ವಾಪಸ್ಸಾಗುತ್ತಿರುವವರ ಪೈಕಿ ಹೆಚ್ಚಿನವರು ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದವರು ಎಂದು ಅನಿಲ್ ನೌತಿಯಾಲ್ ಹೇಳಿದ್ದಾರೆ.
ಸೌದಿಯನ್ನು ತೊರೆಯುತ್ತಿರುವ ಭಾರತೀಯ ನಾಗರಿಕರಿಗಾಗಿಯೇ ಅಲ್ಲಿನ ಸರ್ಕಾರ ಪ್ರತ್ಯೇಕ ಕೇಂದ್ರಗಳನ್ನು ತೆರೆದಿದ್ದು, ಅಕ್ರಮವಾಗಿ ವಾಸಿಸುತ್ತಿರುವವರಿಗೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿರುವುದಾಗಿ ಅನಿಲ್ ನೌತಿಯಾಲ್ ತಿಳಿಸಿದ್ದಾರೆ.