ನವದೆಹಲಿ: ಪಾಕಿಸ್ತಾನ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂಬ ಅಫ್ಘಾನಿಸ್ತಾನ, ಭಾರತದ ಆರೋಪಕ್ಕೆ ಈಗ ಇರಾನ್ ಸಹ ಧ್ವನಿಗೂಡಿಸಿದೆ.
ಇರಾನ್-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಇರಾನ್ ನ ಗಡಿ ಭದ್ರತಾ ಪಡೆಯ 10 ಸಿಬ್ಬಂದಿಗಳನ್ನು ಹತ್ಯೆ ಮಾಡಿದ್ದು, ಉಭಯ ರಾಷ್ಟ್ರಗಳ ನಡುವೆ ಶಾಂತಿಯುತ ವಾತಾವರಣ ಹದಗೆಟ್ಟಿತ್ತು. ಈಗ ಇರಾನ್ ಸಹ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದಿದ್ದು, ಪಾಕಿಸ್ತಾನ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂದು ಆರೋಪಿಸಿದೆ.
ಇರಾನ್ ನಲ್ಲಿ ಶಿಯಾ ಪಂಥದ ಮುಸ್ಲಿಮರು ಹೆಚ್ಚಿದ್ದು, ಶಿಯಾ ಪಂಥದವರು ಇಸ್ಲಾಂ ಗೆ ಅನುಗುಣವಾಗಿಲ್ಲ ಎಂಬ ಕಾರಣದಿಂದ ಪಾಕಿಸ್ತಾನ ಸುನ್ನಿ ಪಂಥದ ಭಯೋತ್ಪಾದಕರಿಂದ ಇರಾನ್ ಮೇಲೆ ದಾಳಿ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇರಾನ್, ಅಫ್ಘಾನಿಸ್ತಾನ, ಭಾರತ ಮೂರು ರಾಷ್ಟ್ರಗಳು ಪಾಕಿಸ್ತಾನದ ನೆರೆ ರಾಷ್ಟ್ರಗಳಾಗಿದ್ದು, ಈ ವರೆಗೂ ಅಫ್ಘಾನಿಸ್ತಾನ ಹಾಗೂ ಭಾರತ ಮಾಡುತ್ತಿದ್ದ ಆರೋಪಗಳಿಗೆ ಈಗ ಇರಾನ್ ಸಹ ಧ್ವನಿಗೂಡಿಸಿದ್ದು, ಪಾಕಿಸ್ತಾನ ಭಯೋತ್ಪಾದನೆ ರಫ್ತು ಮಾಡುತ್ತಿದೆ. ಒಂದು ವೇಳೆ ನಿಲ್ಲಿಸದೇ ಇದ್ದಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.