ವಿದೇಶ

ಭಾರತೀಯ ಮೂಲದ ಬಾಲಕನ ಬರ್ತ್ ಡೇ ಆಹ್ವಾನ ಪತ್ರಕ್ಕೆ ಪ್ರತಿಕ್ರಿಯಿಸಿದ ಬ್ರಿಟನ್ ರಾಣಿ ಎಲಿಜಬೆತ್ II

Srinivas Rao BV
ಲಂಡನ್: ಭಾರತೀಯ ಮೂಲದ ಬಾಲಕನೊಬ್ಬನ ಬರ್ತ್ ಡೇ ಆಹ್ವಾನ ಪತ್ರಕ್ಕೆ ಬ್ರಿಟನ್ ರಾಣಿ ಎಲಿಜಬೆತ್ II ಪ್ರತಿಕ್ರಿಯೆ ನೀಡಿದ್ದಾರೆ. 
ಶಾನ್ ದುಲೆ (4) ಜೂ.25 ರಂದು ತನ್ನ 5 ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, 91 ವರ್ಷದ ರಾಣಿ ಎಲಿಜಬೆತ್ II ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪತ್ರದ ಮೂಲಕ ಆಹ್ವಾನ ಕಳಿಸಿದ್ದಾನೆ. 
ಬಾಲಕನ ಪತ್ರಕ್ಕೆ ರಾಣಿ ಎಲಿಜಬೆತ್ ಅವರ ಆಪ್ತ ಸಿಬ್ಬಂದಿಗಳು ಪ್ರತಿಕ್ರಿಯೆ ನೀಡಿದ್ದು, "ರಾಣಿಗೆ ಪೂರ್ವ ನಿಗದಿತ ಕಾರ್ಯಕ್ರಮಗಳಿದ್ದು ಬಿಡುವಿಲ್ಲದ ವೇಳಾಪಟ್ಟಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬರ್ತ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಪತ್ರ ಬರೆದು ಆಹ್ವಾನ ನೀಡಿರುವುದಕ್ಕೆ ರಾಣಿ ಎಲಿಜಬೆತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಅವರ ಬಗ್ಗೆ ನಿಮಗಿರುವ ಗೌರವಾದರಗಳಿಂದ ಸಂತೋಷಗೊಂಡಿದ್ದಾರೆ. ಜೂ.25 ಅತ್ಯಂತ ಸಂಭ್ರಮದ ಜನ್ಮದಿನಾಚರಣೆಯಾಗಿರಲೆಂದು ರಾಣಿ ಆಶಿಸುತ್ತಾರೆ" ಎಂದು ಬಾಲಕನಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 
"ಶಾನ್ ದುಲೆಗೆ ರಾಣಿ ಎಲಿಜಬೆತ್ ಎಂದರೆ "ನಿಜವಾದ ಸೂಪರ್ ಹಿರೋ" ಎಂಬ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ತನ್ನ ಜನ್ಮದಿನಾಚರಣೆಯ ಕಾರ್ಯಕ್ರಮಕ್ಕೆ ರಾಣಿಯನ್ನು ಅರಮನೆಗೆ ತೆರಳಿ ಖುದ್ದಾಗಿ ಆಹ್ವಾನಿಸುತ್ತೇನೆಂದು ಪಟ್ಟು ಹಿಡಿದಿದ್ದ. ಆದರೆ ರಾಣಿ ಅರಮನೆಯಲ್ಲಿ ಕಾರ್ಯನಿರತರಾಗಿರುತ್ತಾರೆ ಆದ್ದರಿಂದ ಖುದ್ದಾಗಿ ಭೇಟಿ ಮಾಡಲು ಸಾಧ್ಯವಿರುವುದಿಲ್ಲ ಎಂದಾಗ ಪತ್ರದ ಮೂಲಕ ಆಹ್ವಾನ ನೀಡಿದ" ಎಂದು ಶಾನ್ ದುಲೆ ತಾಯಿ ಬಲ್ಜಿಂದರ್ ಹೇಳಿದ್ದಾರೆ.  
ಬಕಿಂಗ್ಹ್ಯಾಮ್ ಅರಮನೆಯಿಂದ ಪತ್ರ ಬಂದಾಗ ಸ್ವಲ್ಪ ನಿರಾಸೆಯಾಗಿತ್ತು. ನನಗೆ ರಾಣಿ, ಅವರ ಕುದುರೆ ಹಾಗು ನಾಯಿಗಳು ಇಷ್ಟ, ಬೇಸಿಗೆಯಲ್ಲಿ ಅರಮನೆಗೆ ಭೇಟಿ ನೀಡುತ್ತೇನೆ, ಆಗ ಅವರನ್ನು ಬಹುಶಃ ಭೇಟಿ ಮಾಡುತ್ತೇನೆ ಎಂದು ಶಾನ್ ಪತ್ರಕ್ಕೆ ಬಂದಿರುವ ಪ್ರತಿಕ್ರಿಯೆ ಬಗ್ಗೆ ಹೇಳಿಕೆ ನೀಡಿದ್ದಾನೆ. 
ಅರಮನೆಯಿಂದ ಪತ್ರಕ್ಕೆ ಪ್ರತಿಕ್ರಿಯೆ ಬಂದಿದ್ದಕ್ಕೆ ಶಾನ್ ಅತ್ಯಂತ ಸಂತೋಷಗೊಂಡಿದ್ದಾನೆ, ಬೇಸಿಗೆಯಲ್ಲಿ ಆತನನ್ನು ಬಕಿಂಗ್ಹ್ಯಾಮ್ ಅರಮನೆಗೆ ಕರೆದೊಯ್ಯುತ್ತೇವೆ ಎಂದು ಆತನ ತಾಯಿ ಬಲ್ಜಿಂದರ್ ಹೇಳಿದ್ದಾರೆ. 
SCROLL FOR NEXT