ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷಿ ಯೋಜನೆಯಾದ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಹಲವು ಆತಂಕಕಾರಿ ಅಂಶಗಳಿವೆ ಎಂದು ಪಾಕಿಸ್ತಾನ ಬರಹಗಾರ ನದೀರ್ ಹಸನ್ ಹೇಳಿದ್ದಾರೆ.
ನ್ಯೂಸ್ ಇಂಟರ್ ನ್ಯಾಷನಲ್ ನಲ್ಲಿ ನದೀರ್ ಹಸನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಿಪಿಇಸಿ ಆರ್ಥಿಕತೆಯನ್ನೂ ಮೀರಿ ಹೋಗುವ ಸಾಧ್ಯತೆ ಇದ್ದು, 9/11 ದಾಳಿಗೂ ಮುನ್ನ ಅಮೆರಿಕಾ ಮಾಡಿದ್ದಂತೆಯೇ ಪಾಕಿಸ್ತಾನದ ಮೇಲೆ ಒಂದು ರೀತಿಯ ಹಿಡಿತ ಸಾಧಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಸಿಪಿಇಸಿ ಬಗ್ಗೆ ಮಾಹಿತಿಗಳನ್ನು ಇತ್ತೀಚಿನ ವರೆಗೂ ಗೌಪ್ಯವಾಗಿರಿಸಿಕೊಂಡಿದ್ದ ಪಾಕಿಸ್ತಾನ ಈಗ ಮಾಹಿತಿಯನ್ನು ಬಹಿರಂಗಗೊಳಿಸಿದ್ದು, ಸಂಪೂರ್ಣ ಯೋಜನೆಯಲ್ಲಿ ಕೆಲವು ಆತಂಕಕಾರಿ ಅಂಶಗಳಿವೆ ಎಂದು ನದೀರ್ ಹಸನ್ ಎಚ್ಚರಿಕೆ ನೀಡಿದ್ದಾರೆ.
ಕೇವಲ ಆರ್ಥಿಕತೆಗಾಗಿ ಚೀನಾ ಹೇಳುತ್ತಿರುವ "ಎಲ್ಲದಕ್ಕೂ" ಪಾಕಿಸ್ತಾನ ಒಪ್ಪಿಗೆ ನೀಡುತ್ತಿದ್ದು, ದೀರ್ಘಾವಧಿಯಲ್ಲಿ ಇದು ಪಾಕಿಸ್ತಾನದ ಮೇಲೆ ಒಂದು ರೀತಿಯ ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ. ಸಿಪಿಇಸಿ ಯೋಜನೆಯಿಂದಾಗಿ ದೀರ್ಘಾವಧಿಯಲ್ಲಿ ಚೀನಾದ ನಾಗರಿಕರು ಪಾಕಿಸ್ತಾನಕ್ಕೆ ವೀಸಾಮುಕ್ತವಾಗಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ನದೀರ್ ಹಸನ್ ಹೇಳಿದ್ದಾರೆ.
ಸಿಪಿಇಸಿ ಯೋಜನೆ ಮೂಲಕ ಚೀನಾ ಪಾಕಿಸ್ತಾನವನ್ನು ತನ್ನ ವಸಾಹತು ಪ್ರದೇಶವನ್ನಾಗಿ ಮಾಡಿಕೊಳ್ಳುವ ದೀರ್ಘಾವಧಿಯ ಉದ್ದೇಶ ಹೊಂದಿದೆ ಎಂದು ಇತ್ತೀಚೆಗಷ್ಟೆ ಚೀನಾದಲ್ಲಿ ನಡೆದ ಒಆರ್ ಒಬಿ ಸಭೆ ಮುಕ್ತಾಯಗೊಂಡ ನಂತರ ಅಂತಾರಾಷ್ಟ್ರೀಯ ಮಾಧ್ಯಮಗಳು ಚೀನಾ ನಡೆಯನ್ನು ವಿಶ್ಲೇಷಿಸಿದ್ದವು. ಈಗ ನದೀರ್ ಹಸನ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯವೂ ಮಾಧ್ಯಮಗಳ ವಿಶ್ಲೇಶಣೆಗೆ ಪೂರಕವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics