ವಿದೇಶ

ಸಿಪಿಇಸಿ ಭಾರತ-ಪಾಕ್ ನಡುವಿನ ಆತಂಕಗಳನ್ನು ಹೆಚ್ಚಿಸುತ್ತದೆ: ವಿಶ್ವಸಂಸ್ಥೆ ವರದಿ

Srinivas Rao BV
ಬೀಜಿಂಗ್: ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಹಾದುಹೋಗುವ 50 ಬಿಲಿಯನ್ ಡಾಲರ್ ಮೊತ್ತದ ಯೋಜನೆಯಾದ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ ಭಾರತ-ಪಾಕ್ ನಡುವೆ ಈಗಾಗಲೇ ಇರುವ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ವಿಶ್ವಸಂಸ್ಥೆ ವರದಿಯೊಂದು ಎಚ್ಚರಿಸಿದೆ. 
ಏಷ್ಯಾ ಪೆಸಿಫಿಕ್ (ಇಎಸ್ ಸಿಎಪಿ)ಯ ವಿಶ್ವಸಂಸ್ಥೆಯ ಆರ್ಥಿಕ-ಸಾಮಾಜಿಕ ಆಯೋಗ ಸಿಪಿಇಸಿ ಬಗ್ಗೆ ವರದಿ ಪ್ರಕಟಿಸಿದ್ದು, ಸಿಪಿಇಸಿ ಯೋಜನೆ ಭಾರತ-ಪಾಕಿಸ್ತಾನದ ನಡುವಿನ ಭೂ-ರಾಜಕೀಯ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡುವಂತೆ ಮಾಡುವುದರ ಜೊತೆಗೆ ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದದ ಕೂಗನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. 
ಸಿಪಿಇಸಿ ಯೋಜನೆಗೆ ಭಾರತ ವಿರೋಧ ವ್ಯಕ್ತಪಡಿಸಿ ಬಿಆರ್ ಐ ಸಭೆಯನ್ನು ಬಹಿಷ್ಕರಿಸಿದೆ. ಕಾಶ್ಮೀರದ ವಿವಾದವೂ ಸಹ ಆತಂಕಕಾರಿಯಾಗಿದ್ದು, ಅಪ್ಘಾನಿಸ್ತಾನದಲ್ಲಿರುವ ಅಸ್ಥಿರತೆ ಸಹ ಸಿಪಿಇಸಿ ಕಾರ್ಯಸಾಧ್ಯತೆ ಮೇಲೆ ಕಪ್ಪುಛಾಯೆ ಮೂಡಿಸುತ್ತಿದೆ ಎಂದು ವಿಶ್ವಸಂಸ್ಥೆ ಅನುಮಾನ ವ್ಯಕ್ತಪಡಿಸಿದೆ. 
ಸಿಪಿಇಸಿ ಚೀನಾ, ಪಾಕಿಸ್ತಾನ, ಇರಾನ್, ಭಾರತ, ಅಫ್ಘಾನಿಸ್ತಾನಗಳ ನಡುವೆ ಆರ್ಥಿಕ ಹಾಗೂ ವ್ಯಾಪಾರ ಏಕೀಕರಣಕ್ಕೆ ನೆರವಾಗಬಹುದಾದರೂ ಪಾಕಿಸ್ತಾನದಲ್ಲೇ ಆಂತರಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂದು ವಿಶ್ವಸಂಸ್ಥೆ ವರದಿ ಎಚ್ಚರಿಸಿದೆ. 
SCROLL FOR NEXT