ದುಬೈ: ದುಬೈ ನಲ್ಲಿ ವಿನೂನತ ಪ್ರಯೋಗವೊಂದು ನಡೆದಿದ್ದು, ಅನಾರೋಗ್ಯಕ್ಕೊಳಗಾದ ಟೆಡ್ಡಿಗಳಿಗೆ ಚಿಕಿತ್ಸೆ ನೀಡುವ ಟೆಡ್ಡಿ ಬೇರ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಏನು ಟೆಡ್ಡಿ ಬೇರ್ ಗಳಿಗೆ ಆಸ್ಪತ್ರೆನಾ? ಎಂದು ಹುಬ್ಬು ಗಂಟಿಕ್ಕಬೇಡಿ. ಟೆಡ್ಡಿಗಳಿಗಾಗಿಯೇ ಯುಎಇಯಲ್ಲಿ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆಯಾದರೂ ಮಕ್ಕಳಲ್ಲಿ ಎದುರಾಗುವ ಆತಂಕವನ್ನು ಹೋಗಲಾಡಿಸುವುದು ಇದರ ಮುಖ್ಯ ಉದ್ದೇಶ.
ವೈದ್ಯರನ್ನು ನೋಡಿದಾಕ್ಷಣ ಮಕ್ಕಳಲ್ಲಿ ಉಂಟಾಗುವ ಹೆದರಿಕೆ, ಆತಂಕವನ್ನು ಹೋಗಲಾಡಿಸುವುದಕ್ಕೆ ಸಹಕಾರಿಯಾಗುವಂತೆ ಮೊಹಮ್ಮದ್ ಬಿನ್ ರಶೀದ್ ವಿವಿಯ ಮೆಡಿಕಲ್ ಹಾಗೂ ಹೆಲ್ತ್ ಸೈನ್ಸಸ್(ಎಂಬಿಆರ್ ಯು) ನಲ್ಲಿ ಟೆಡ್ಡಿ ಬೇರ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಟೆಡ್ಡಿ ಬೇರ್ ಗಳಿಗೆ ಸಿ-ಟಿ ಸ್ಕ್ಯಾನ್ ಮಾಡಲಾಗುತ್ತದೆ. ಸರ್ಜರಿ ಮಾಡುವ ಆಪರೇಷನ್ ಥಿಯೇಟರ್ ಗೂ ಕರೆದೊಯ್ಯಲಾಗುತ್ತದೆ. ಅಷ್ಟೇ ಅಲ್ಲದೇ ಮಕ್ಕಳೇ ಟೆಡ್ಡಿಗಳನ್ನು ಹಿಡಿದು ವೈದ್ಯರ ಬಳಿ ಹೋಗುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ವೈದ್ಯರೊಂದಿಗೆ ಮಾತನಾಡಲು ಅವಕಾಶ ನೀಡಲಾಗಿದೆ.
ಟೆಡ್ಡಿಗಳನ್ನು ಹಿಡಿದು, ಅವುಗಳ ಅನಾರೋಗ್ಯದ ಬಗ್ಗೆ ಮಕ್ಕಳು ವೈದ್ಯರೊಂದಿಗೆ ಮಾತನಾಡುವುದರಿಂದ ವೈದ್ಯರನ್ನು ನೋಡಿದ ಕೂಡಲೇ ಮಕ್ಕಳಲ್ಲಿ ಉಂಟಾಗುವ ಭಯ ಹಾಗೂ ಆತಂಕವನ್ನು ಹೋಗಲಾಡಿಸಬಹುದು ಎಂಬುದು ಆಸ್ಪತ್ರೆಯ ಉದ್ದೇಶವಾಗಿದೆ.
ಸಿಮ್ಯುಲೇಶನ್ ಶಿಕ್ಷಕರಾಗಿರುವ ಹೆಲೆನ್ ಹೆಂಡರ್ಸನ್ ಈ ಬಗ್ಗೆ ಮಾತನಾಡಿದ್ದು, ಟೆಡ್ಡಿ ಬೇರ್ ಆಸ್ಪತ್ರೆಗೆ ಭೇಟಿ ನೀಡುವುದರಿಂದ ಮಕ್ಕಳು ಆಸ್ಪತ್ರೆಯ ವಾತಾವರಣ ಹಾಗೂ ಅಲ್ಲಿನ ಪ್ರಕ್ರಿಯೆಗಳ ಬಗ್ಗೆ ಅರಿತುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇದೊಂದು ಅದ್ಭುತ ಕ್ರಮವಾಗಿದ್ದು, ಇಡೀ ದೇಶದಲ್ಲೇ ಮೊದಲ ಪ್ರಯೋಗವಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಯ ಬಗ್ಗೆ ಶಾಲಾ ಪಠ್ಯದಲ್ಲಿಯೂ ಪಾಠವನ್ನು ಅಳವಡಿಸಬೇಕು ಹಾಗೂ ಶೈಕ್ಷಣಿಕ ಅನುಭವದ ರೂಪದಲ್ಲಿ ಮಕ್ಕಳಿಗೆ ಬೋಧಿಸಬೇಕು ಎಂದು ಹೆಲೆನ್ ಹೆಂಡರ್ಸನ್ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics