ಇಸ್ಲಾಮಾಬಾದ್: ಅಮೆರಿಕಾ ಅಧ್ಯಕ್ಷರ ಪ್ರವಾಸ ನಿಷೇಧ ದೇಶಗಳ ಪಟ್ಟಿಯಲ್ಲಿ ಇಲ್ಲದಿದ್ದರೂ ಕೂಡ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ಪಾಕಿಸ್ತಾನ ಪ್ರಜೆಗಳಿಗೆ ಅಮೆರಿಕಾ ನೀಡಿದ ವೀಸಾ ಸಂಖ್ಯೆಯಲ್ಲಿ ಶೇಕಡಾ 40ರಷ್ಟು ಕಡಿಮೆಯಾಗಿದೆ.
ಆಸಕ್ತಿಕರ ವಿಷಯವೆಂದರೆ ವಲಸೆರಹಿತ ಯುಎಸ್ ವೀಸಾಗಳು ಭಾರತೀಯರಿಗೆ ನೀಡಿದ್ದರಲ್ಲಿ ಕಳೆದ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಶೇಕಡಾ 28ರಷ್ಟು ಜಾಸ್ತಿಯಾಗಿದೆ. ಇದು ಕಳೆದ ವರ್ಷದ ಸರಾಸರಿಗೆ ಹೋಲಿಕೆ ಮಾಡಿದರೆ ಹೆಚ್ಚಾಗಿದೆ ಎಂದು ತಿಂಗಳ ಅಧಿಕೃತ ಅಂಕಿಅಂಶ ತಿಳಿಸುತ್ತದೆ.
ಪಾಕಿಸ್ತಾನಿಯರಿಗೆ ನೀಡಿದ ವಲಸೆರಹಿತ ವೀಸಾಗಳಲ್ಲಿ ಕಳೆದ ವರ್ಷದ ಮಾರ್ಚ್-ಏಪ್ರಿಲ್ ತಿಂಗಳುಗಳಿಗೆ ಹೋಲಿಸಿದರೆ ಈ ವರ್ಷ ಶೇಕಡಾ 40ರಷ್ಟು ಕಡಿಮೆಯಾಗಿದೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ. ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ಬಿಡುಗಡೆ ಮಾಡಿರುವ ಅಂಕಿಅಂಶಗಳು ಹೇಳುತ್ತವೆ.
ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಏಪ್ರಿಲ್ ನಲ್ಲಿ 3,925 ಮತ್ತು ಮಾರ್ಚ್ ತಿಂಗಳಲ್ಲಿ 3,973 ಪಾಕಿಸ್ತಾನಿಯರಿಗೆ ವಲಸೆರಹಿತ ವೀಸಾವನ್ನು ನೀಡಲಾಗಿದೆ. ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದಾಗ ಕಳೆದ ವರ್ಷ ಪಾಕಿಸ್ತಾನಿಯರಿಗೆ 78,637 ವಲಸೆರಹಿತ ವೀಸಾವನ್ನು ನೀಡಿತ್ತು. ಅದು ಈ ವರ್ಷಕ್ಕಿಂತ ಸರಾಸರಿ ಶೇಕಡಾ 40ರಷ್ಟು ಹೆಚ್ಚಾಗಿತ್ತು.
ಈ ಮಾರ್ಚ್ ಗಿಂತ ಮೊದಲು ರಾಜ್ಯ ಇಲಾಖೆ ತಿಂಗಳು ತಿಂಗಳು ವೀಸಾ ನೀಡಿಕೆಯ ಅಂಕಿಅಂಶವನ್ನು ಬಿಡುಗಡೆ ಮಾಡುತ್ತಿರಲಿಲ್ಲ. ವಾರ್ಷಿಕ ಅಂಕಿಅಂಶವನ್ನು ನೀಡುತ್ತಿತ್ತು. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳ ಅಂಕಿಅಂಶ ಕಳೆದ ಮತ್ತು 2015ರ ಸಾಲಿನ ಸರಾಸರಿ ಅಂಕಿಅಂಶಗಳಿಗೆ ಹೋಲಿಕೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಇಲಾಖೆ ವಕ್ತಾರ, ವೀಸಾ ಬೇಡಿಕೆ ಆವರ್ತಕವಾಗಿದ್ದು ವರ್ಷವಿಡೀ ಒಂದೇ ರೀತಿ ಇರುವುದಿಲ್ಲ. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವಿಷಯಗಳನ್ನು, ಕಾರಣಗಳನ್ನು ಅವಲಂಬಿಸಿರುತ್ತದೆ. ಪ್ರವಾಸ ಋತುಗಳಲ್ಲಿ ವೀಸಾ ನೀಡಿಕೆ ಸಂಖ್ಯೆ ಹೆಚ್ಚಿರುತ್ತದೆ ಎನ್ನುತ್ತಾರೆ.
ಅಂಕಿಅಂಶ ಪ್ರಕಾರ, ಈ ವರ್ಷ ಏಪ್ರಿಲ್ ನಲ್ಲಿ 87,049 ಭಾರತೀಯರು ಮತ್ತು ಮಾರ್ಚ್ ತಿಂಗಳಲ್ಲಿ 97,925 ಭಾರತೀಯರು ವೀಸಾ ಪಡೆದಿದ್ದಾರೆ. ಕಳೆದ ವರ್ಷದಲ್ಲಿ ತಿಂಗಳಿಗೆ ಸರಾಸರಿ 72,082 ಭಾರತೀಯರು ವಲಸೆ ರಹಿತ ವೀಸಾ ಪಡೆದಿದ್ದು ವಾರ್ಷಿಕವಾಗಿ ಇದರ ಸಂಖ್ಯೆ 8,64,987 ಆಗಿದೆ.
ಕೇವಲ ಪಾಕಿಸ್ತಾನ ಮಾತ್ರವಲ್ಲದೆ 50ಕ್ಕೂ ಹೆಚ್ಚು ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಿಗೆ ಈ ವರ್ಷ ಅಮೆರಿಕಾ ನೀಡಿದ ವಲಸೆರಹಿತ ವೀಸಾ ಪ್ರಮಾಣ ಏಪ್ರಿಲ್ ತಿಂಗಳಲ್ಲಿ ಶೇಕಡಾ 20ರಷ್ಟು ಕಡಿಮೆಯಾಗಿದೆ.
ಆರು ಮುಸ್ಲಿಂ ರಾಷ್ಟ್ರಗಳಾದ ಇರಾನ್, ಸಿರಿಯಾ, ಸೂಡಾನ್, ಸೊಮಾಲಿಯಾ, ಲಿಬಿಯಾ ಮತ್ತು ಯೆಮೆನ್ ದೇಶಗಳಲ್ಲಿ ಅಮೆರಿಕಾದ ವಲಸೆರಹಿತ ವೀಸಾಗಳ ಪ್ರಮಾಣ ಈ ವರ್ಷ ಶೇಕಡಾ 55ರಷ್ಟು ಇಳಿಕೆಯಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos