ದಾಳಿ ನಡೆದ ಅಲ್-ರವ್ದಾಹ್ ಮಸೀದಿ
ಕೈರೋ: ಇಸ್ಲಾಮಿಕ್ ಸ್ಟೇಟ್ ಉಗ್ರರು ಶುಕ್ರವಾರ ಈಜಿಪ್ಟ್‌ನ ಉತ್ತರ ಭಾಗದ ಸಿನಾಯ್ ಪ್ರಾಂತ್ಯದ ಮಸೀದಿಯೊಂದನ್ನು ಸ್ಫೋಟಿಸಿ, ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 200 ಮಂದಿ ಮೃತಪಟ್ಟಿದ್ದಾರೆ ಎಂದು ಈಜಿಪ್ಟ್ ನ ಸರ್ಕಾರಿ ಸುದ್ದಿ ಸಂಸ್ಥೆ ಎಂಇಎನ್ ಎ ವರದಿ ಮಾಡಿದೆ.
ಎಲ್-ಆರಿಷ್ ಪ್ರಾಂತ್ಯದ ರಾಜಧಾನಿ ಬಿರ್ ಅಲ್ ಅಬ್ದ್ ನಗರ ಅಲ್-ರವ್ದಾಹ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಉಗ್ರರು ಈ ದಾಳಿ ನಡೆಸಿದ್ದು, ದಾಳಿಯಲ್ಲಿ 200 ಮಂದಿ ಮೃತಪಟ್ಟಿದ್ದಾರೆ ಮತ್ತು 120 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿರುವುದಾಗಿ ಎಂಇಎನ್ಎ ವರದಿ ಮಾಡಿದೆ.
ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಉಗ್ರರು ನಾಲ್ಕು ವಾಹನಗಳನ್ನು ಮಸೀದಿಗೆ ನುಗ್ಗಿಸಿ ಸ್ಫೋಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಸುದ್ದಿ ತಿಳಿದ ಕೂಡಲೇ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ್ದಾರೆ.
ಉತ್ತರ ಸಿನಾಯ್ ಪ್ರಾಂತ್ಯದಲ್ಲಿ ಈಜಿಪ್ಟ್ ಐಸಿಸ್ ಉಗ್ರರ ಜತೆ ಕದನ ನಡೆಸುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ನೂರಾರು ಪೊಲೀಸರು ಹಾಗೂ ಸೈನಿಕರು ಮೃತಪಟ್ಟಿದ್ದಾರೆ.