ಈಜಿಪ್ಟ್ ನ ಮಸೀದಿ ಮೇಲಿನ ದಾಳಿ ಅತ್ಯಂತ ಹೇಯ ಕೃತ್ಯ: ಭಾರತ ಖಂಡನೆ
ಈಜಿಪ್ಟ್ ನ ಮಸೀದಿ ಮೇಲೆ ನಡೆದ ದಾಳಿಯನ್ನು ಭಾರತ ಉಗ್ರವಾಗಿ ಖಂಡಿಸಿದ್ದು ಇದೊಂದು ಭಯೋತ್ಪಾದಕರ ಅತ್ಯಂತ ಹೇಯ ಕೃತ್ಯ ಎಂದು ಬಣ್ಣಿಸಿದೆ...
ನವದೆಹಲಿ: ಈಜಿಪ್ಟ್ ನ ಮಸೀದಿ ಮೇಲೆ ನಡೆದ ದಾಳಿಯನ್ನು ಭಾರತ ಉಗ್ರವಾಗಿ ಖಂಡಿಸಿದ್ದು ಇದೊಂದು ಭಯೋತ್ಪಾದಕರ ಅತ್ಯಂತ ಹೇಯ ಕೃತ್ಯ ಎಂದು ಬಣ್ಣಿಸಿದೆ.
ನಿನ್ನೆ ಸಾಯಂಕಾಲ ಈಜಿಪ್ಟ್ ನ ಉತ್ತರ ಸಿನೈ, ಬಿರ್-ಅಲ್-ಅಬೆಡ್ ನ ಮಸೀದಿ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 200ಕ್ಕೂ ಅಧಿಕ ಮುಗ್ಧ ನಾಗರಿಕರು ಮೃತಪಟ್ಟಿದ್ದು ಇದೊಂದು ಹೇಯ ಕೃತ್ಯವಾಗಿದೆ. ಈ ಸಂದರ್ಭದಲ್ಲಿ ಭಾತ ಸರ್ಕಾರ ಈಜಿಪ್ಟ್ ಸರ್ಕಾರದ ನೆರವಿಗೆ ನಿಲ್ಲುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ದಾಳಿಯಲ್ಲಿ ಮೃತಪಟ್ಟ ಕುಟುಂಬದವರಿಗೆ ತೀವ್ರ ಸಂತಾಪ ಸೂಚಿಸಿರುವ ಭಾರತ ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಹೋರಾಡಲು ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸುತ್ತದೆ ಎಂದು ಅವರು ಹೇಳಿದ್ದಾರೆ.
ನಿನ್ನೆ ಸಾಯಂಕಾಲ ಈಜಿಪ್ಟ್ ನ ಉತ್ತರ ಸಿನೈ ದ್ವೀಪದಲ್ಲಿ ಮಸೀದಿಯೊಂದರಲ್ಲಿ ಅಪಾರ ಸಂಖ್ಯೆಯಲ್ಲಿ ನಾಗರಿಕರು ಪ್ರಾರ್ಥನೆ ಸಲ್ಲಿಸಲು ಜಮಾಯಿಸಿದ್ದ ವೇಳೆ ಬಾಂಬ್ ಸ್ಫೋಟಗೊಂಡಿತು. ಬಾಂಬ್ ಸ್ಫೋಟಗೊಂಡ ಕೂಡಲೇ ಕಾರಿನಲ್ಲಿ ಆಗಮಿಸಿದ ಬಂದೂಕು ಶಸ್ತ್ರಧಾರಿಗಳು ಸೇರಿದ್ದ ಜನರ ಗುಂಪಿನ ಮೇಲೆ ಗುಂಡಿನ ಮಳೆಗರೆದು ನಾಪತ್ತೆಯಾದರು.
ಪ್ರಾರ್ಥನೆಗೆ ಬಂದ ಹೆಚ್ಚಿನವರು ಭದ್ರತಾ ಪಡೆ ಯೋಧರ ಕುಟುಂಬದವರು ಮತ್ತು ಸ್ನೇಹಿತರಾಗಿದ್ದರು. ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು.
ಇದುವರೆಗೆ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.