ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸಯೀದ್
ಇಸ್ಲಾಮಾಬಾದ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸಯೀದ್ ಬಿಡುಗಡೆಯನ್ನು ಪಾಕಿಸ್ತಾನ ಶನಿವಾರ ಸಮರ್ಥಿಸಿಕೊಂಡಿದೆ.
ಹಫೀಜ್ ಸಯೀದ್ ಬಿಡುಗಡೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸರ್ ಅವರು ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್'ಸಿ) 1267 ಸಮಿತಿಯ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಬದ್ಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ನಿಲುವುಗಳನ್ನು ತೆಗೆದುಕೊಂಡಿದ್ದೇವೆಂದು ಹೇಳಿದ್ದಾರೆ.
ಪಾಕಿಸ್ತಾನದ ನ್ಯಾಯಾಲಯದ ಸಂವಿಧಾನಾತ್ಮಕ ಕರ್ತವ್ಯದ ಅನುಸಾರ, ಕಾನೂನಿನ ನಿಯಮಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ. ಕಾನೂನು ಪ್ರಕ್ರಿಯೆಗಳು, ಕಾನೂನು ನಿಯಮಗಳಿಗೆ ಬದ್ಧವಾಗಿದೆ. ರಾಜಕೀಯಕ್ಕೆ, ತಪ್ಪು ಹಾದಿಗೆ ಎಳೆಯುವುದಕ್ಕಲ್ಲ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾನೂನನ ಆಳ್ವಿಕೆಯಲಲಿ ಅನುಸರಿಸಬೇಕಾದ ಅಗತ್ಯತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತ ಎಲ್ಲಾ ದೇಶಗಳು ನಡೆಯಬೇಕು.
ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ತೆಗೆದುಕೊಳ್ಳುವ ನಿಲುವು, ಕ್ರಮಗಳಿಗೆ ಯಾವುದೇ ದೇಶಗಳು ಸಾಟಿಯಿಲ್ಲ. ಭಯೋತ್ಪಾದನೆ ಯಾವುದೇ ರೂಪದಲ್ಲಿದ್ದರೂ ಅದನ್ನು ಪಾಕಿಸ್ತಾನ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಕಾಯ್ದೆ ಅಡಿಯಲ್ಲಿ ಕೆಲ ತಿಂಗಳ ಹಿಂದೆ ಹಫೀಜ್ ನನ್ನು ಬಂಧನಕ್ಕೊಳಪಡಿಸಲಾಗಿತ್ತು. ಜ.31ರಿಂದಲೂ ಹಫೀಜ್ ನನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಗೃಹ ಬಂಧನದಲ್ಲಿರಿಸಿದ್ದ ಪಾಕಿಸ್ತಾನ ಸರ್ಕಾರ ಹಫೀಜ್ ವಿರುದ್ದ ಯಾವುದೇ ರೀತಿಯ ಸಾಕ್ಷ್ಟಾಧಾರಗಳನ್ನು ಒದಗಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಸಾಕ್ಷ್ಯಾಧಾರ ಒದಗಿಸಿ, ಇಲ್ಲವೇ ಹಫೀಜ್ ನನ್ನು ಬಂಧನ ಮುಕ್ತನನ್ನಾಗಿ ಮಾಡಲಾಗುತ್ತದೆ ಎಂದು ಸೂಚಿಸಿ, ಪಾಕಿಸ್ತಾನ ಸರ್ಕಾರಕ್ಕೆ ಕಾಲಾವಕಾಶವನ್ನು ನೀಡಿತ್ತು.
ಹಫೀಜ್ ವಿರುದ್ಧ ಸಾಕ್ಷ್ಯಾಧಾರ ಒದಗಿಸುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಹಫೀಜ್ ನಿನ್ನೆ ಬಂಧನ ಮುಕ್ತನಾಗಿದ್ದಾನೆ.