ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸೀಫ್ (ಸಂಗ್ರಹ ಚಿತ್ರ)
ಇಸ್ಲಾಮಾಬಾದ್: ನಮ್ಮ ದೇಶದ ಅಣು ಸ್ಥಾವರಗಳ ಮೇಲೆ ಭಾರತ ದಾಳಿ ಮಾಡಿದರೂ ನಾವು ಸಂಯಮ ಮೀರಿ ವರ್ತಿಸುವುದಿಲ್ಲ ಎಂದು ಹೇಳಲಾಗದು, ಭಾರತ ಅಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದೇ ಆದರೆ ನಾವು ಪೂರ್ಣಪ್ರಮಾಣದ ಅಣ್ವಸ್ತ್ರ ಪ್ರತಿದಾಳಿ ನಡೆಸಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ.
ನಿನ್ನೆಯಷ್ಟೇ ಭಾರತದ ಏರ್ ಚೀಫ್ ಮಾರ್ಷಲ್ ಧನೋವಾ ಅವರು, ವಾಯು ಸೇನೆ ಕೂಡ ಸರ್ಜಿಕಲ್ ಸ್ಟ್ರೈಕ್ ನಡೆಸುವ ಸಾಮರ್ಥ್ಯ ಹೊಂದಿದ್ದು, ಪಾಕಿಸ್ತಾನ ಅಣ್ವಸ್ತ್ರ ಸ್ಥಾವರಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸೀಫ್ ಅವರು, 'ಪಾಕಿಸ್ತಾನದ ಅಣುಸ್ಥಾವರಗಳ ಮೇಲೆ ಭಾರತ ದಾಳಿ ನಡೆಸಿದರೆ ಪಾಕಿಸ್ತಾನ ತನ್ನ ಸಂಯಮವನ್ನು ಮೀರಿ ವರ್ತಿಸ ಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ಪೂರ್ಣ ಪ್ರಮಾಣದ ಅಣ್ವಸ್ತ್ರ ಪ್ರತಿದಾಳಿ ನಡೆಸಲು ಪಾಕಿಸ್ತಾನ ಸಿದ್ಧ ಎಂದು ಹೇಳಿದ್ದಾರೆ.
ಭಾರತೀಯ ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ ಹೇಳಿಕೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಅಮೆರಿಕದ ಇನ್ ಸ್ಟಿಟ್ಯೂಟ್ ಆಫ್ ಪೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಖ್ವಾಜಾ ಆಸಿಫ್ ಅವರು, "ಭಾರತ ಅಂತಹ ದಾಳಿ ನಡೆಸಿದರೆ ನಮ್ಮಿಂದ ಯಾರೂ ಸಂಯಮ ನಿರೀಕ್ಷಿಸಬೇಡಿ. ಇದು ನಾನು ಬಳಸುವ ಅತ್ಯಂತ ರಾಜತಾಂತ್ರಿಕ ಭಾಷೆ ಎಂದರು.
ಇದೇ ವೇಳೆ ಭಾರತದೊಂದಿಗಿನ ಸಂಬಂಧ ಸುಧಾರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಭಾರತದೊಂದಿಗಿನ ಸಂಬಂಧ ಸೂಕ್ಷ್ಮವಾಗಿದೆ. ದುಃಖಕರ ವಿಚಾರವೆಂದರೆ ಪಾಕಿಸ್ತಾನ ಎಷ್ಟೇ ಪ್ರಯತ್ನಿಸಿದರೂ ಭಾರತದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುತ್ತಿಲ್ಲ. ಸಾಮಾನ್ಯ ಮಾತುಕತೆಗೆ ಕಾಶ್ಮೀರ ವಿಚಾರ ಅಡ್ಡಿಯಾಗಿದೆ ಎಂದು ಆಸಿಫ್ ಹೇಳಿದರು.