ವಿದೇಶ

ಆಫ್ಘನ್ ಸೇನಾ ಕ್ಯಾಂಪ್ ಮೇಲೆ ಭೀಕರ ಆತ್ಮಹತ್ಯಾ ದಾಳಿ: 41 ಯೋಧರ ಸಾವು!

Srinivasamurthy VN
ಕಾಬುಲ್: ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳನ್ನು ಆಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವ ಕುರಿತು ಅಮೆರಿಕ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಸೇನಾ  ಕ್ಯಾಂಪ್ ಮೇಲೆ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 41 ಮಂದಿ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಫ್ಘಾನಿಸ್ತಾನದ ಕಂದಹಾರ್ ನಲ್ಲಿರುವ ಸೇನಾ ಕ್ಯಾಂಪ್ ಮೇಲೆ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದು, ಈ ವೇಳೆ ಕ್ಯಾಂಪ್ ನಲ್ಲಿದ್ದ ಸುಮಾರು 41 ಮಂದಿ ಆಫ್ಘನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ  ಸ್ಥಳೀಯ ಜನಪ್ರತಿನಿಧಿ ಖಲೀದ್ ಪುಷ್ಟನ್ ಮಾಹಿತಿ ನೀಡಿದ್ದು, ಸೇನಾ ವಾಹನದಲ್ಲಿ ಬಂದ ಇಬ್ಬರು ಆಂತಕವಾದಿಗಳು ನಡೆಸಿದ ದಾಳಿಯಲ್ಲಿ 41 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. 
ಗಾಯಾಳುಗಳನ್ನು ಸಮೀಪದ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಹಲವರ ಸ್ಥಿತಿ ಚಿಂತಾ ಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
ಇನ್ನು ದಾಳಿ ಹೊಣೆಯನ್ನು ಕುಖ್ಯಾತ ಉಗ್ರ ಸಂಘಟನೆ ತಾಲಿಬಾನ್ ಹೊತ್ತಿದ್ದು, ಆಫ್ಘಾನಿಸ್ತಾನದಲ್ಲಿನ ಸೈನಿಕ ಕಾರ್ಯಾಚರಣೆಯನ್ನು ವಿರೋಧಿಸಿ ಈ ದಾಳಿ ಮಾಡಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.
ಆಫ್ಘಾನಿಸ್ತಾನದಲ್ಲಿ ಉಗ್ರ ನಿಗ್ರಹ ಕಾರ್ಯಾತರಣೆಯಲ್ಲಿ ತೊಡಗಿದ್ದ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಕುರಿತು ಅಮೆರಿಕ ಸರ್ಕಾರ ನಿರ್ಧಾರಕ ಕೊಂಡ ಬಳಿಕ ಆಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರ  ಉಪಟಳ ಹೆಚ್ಚಾಗಿದೆ.
SCROLL FOR NEXT