ಬೀಜಿಂಗ್: ದಲೈಲಾಮ ಅವರಿಗೆ ಯಾವುದೇ ವಿದೇಶಿ ನಾಯಕ, ದೇಶ ಆತಿಥ್ಯ ನೀಡುವುದು ಹಾಗೂ ಅವರನ್ನು ಭೇಟಿ ಮಾಡುವುದನ್ನು ಅಪರಾಧವಾಗಿ ಪರಿಗಣಿಸುತ್ತೇವೆ ಎಂದು ಚೀನಾ ಹೇಳಿಕೆ ನೀಡಿದೆ.
ಟಿಬೇಟ್ ನ ಬೌದ್ಧ ಧರ್ಮಗುರು ದಲೈ ಲಾಮ ಅವರನ್ನು ಪ್ರತ್ಯೇಕತಾವಾದಿ ನಾಯಕ ಎಂದು ಚೀನಾ ಪರಿಗಣಿಸಿದ್ದು, ಯಾವುದೇ ನಾಯಕರು, ದೇಶ ದಲೈ ಲಾಮ ಅವರನ್ನು ಭೇಟಿ ಮಾಡುವುದನ್ನು ಅಪರಾಧ ಎಂದು ನಿರಂತರವಾಗಿ ಹೇಳುತ್ತಿದೆ. ಅಷ್ಟೇ ಅಲ್ಲದೇ ಟಿಬೆಟ್ ನ್ನು ಚೀನಾದ ಭಾಗವೆಂದು ಒಪ್ಪಿಕೊಳ್ಳುವಂತೆ ವಿಶ್ವನಾಯಕರಿಗೆ ಒತ್ತಡ ಹೇರುತ್ತಿದೆ.
ಈ ಹಿಂದೆ ಈಶಾನ್ಯ ರಾಜ್ಯಗಳಿಗೆ ದಲೈ ಲಾಮ ಭೇಟಿ ನೀಡಿದ್ದನ್ನೂ ವಿರೋಧಿಸಿದ್ದ ಚೀನಾ, ದಲೈ ಲಾಮ ಅವರ ಭೇಟಿಗೆ ಅನುಮತಿ ನೀಡಿದ್ದ ಭಾರತ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈಗ ಮತ್ತೊಮ್ಮೆ ದಲೈ ಲಾಮ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ದಲೈ ಲಾಮ ಅವರನ್ನು ಭೇಟಿ ಮಾಡುವುದೇ ದೊಡ್ಡ ಅಪರಾಧ ಎನ್ನುತ್ತಿದೆ.