ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲಿ
ವಾಷಿಂಗ್ಟನ್: ಜಲಜನಕ ಬಾಂಬ್ ಹಾಗೂ ಅಣ್ವಸ್ತ್ರ ದಾಳಿಯ ಬೆದರಿಕೆಯ ಮೂಲಕ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಉತ್ತರ ಕೊರಿಯಾ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲಿಯವರು ಹೇಳಿದ್ದಾರೆ.
ಯುದ್ದೋತ್ಸಾಹ ಪ್ರದರ್ಶಿಸುತ್ತಿಸುತ್ತಿರುವ ಉತ್ತರ ಕೊರಿಯಾ ನಡೆ ಕುರಿತು ವಿಶ್ವಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವ ಹ್ಯಾಲೆಯವರು, ವಿಶ್ವಸಂಸ್ಥೆಯ ಹಲವು ನಿರ್ಬಂಗಳ ಹೊರತಾಗಿಯೂ ಕ್ಷಿಪಣಿ ಮತ್ತು ಅಣುಬಾಂಬ್ಪರೀಕ್ಷೆಗಳನ್ನು ಮಾಡುವ ಮೂಲಕ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಜಾಗತಿಕ ಮಟ್ಟದಲ್ಲಿ ಯುದ್ಧ ನಡೆಸಲು ಎಲ್ಲಿಲ್ಲದ ಉತ್ಸಾಹವನ್ನು ತೋರುತ್ತಿದ್ದಾರೆಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಜಲಜನಕ ಬಾಂಬ್ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾ, ಇದೊಂದು ಪರಿಪೂರ್ಣ ಯಶಸ್ಸು ಎಂದು ಜಂಭಕೊಚ್ಚಿಕೊಂಡಿತ್ತು. 2006ರ ಬಳಿಕ ಉತ್ತರ ಕೊರಿಯಾ ನಡೆಸಿದ್ದ 5ನೇ ಪರಮಾಣು ಪರಿಕ್ಷೆ ಇದಾಗಿದ್ದು, ಉತ್ತರಕೊರಿಯಾದ ಈ ನಡೆಗೆ ಜಾಗತಿಕವಾಗಿ ವ್ಯಾಪಕ ಟೀಕೆ ಹಾಗೂ ಆಕ್ಷೇಪಗಳು ವ್ಯಕ್ತವಾಗತೊಡಗಿವೆ. ಜೊತೆಗೆ ಅಮೆರಿಕಾ ರಾಷ್ಟ್ರದ ಕಠಿಣ ನಿರ್ಬಂಧಗಳಿಗೂ ಒಳಗಾಗಿದೆ.
ಕಿಮ್ ಜಾಂಗ್ ಅವರ ವರ್ತನೆ ಹಾಗೂ ನಡೆಯನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಅಣ್ವಸ್ತ್ರ ಪರೀಕ್ಷೆ ಮೂಲಕ ಉತ್ತರ ಕೊರಿಯಾವನ್ನು ಬಲಿಷ್ಠ ರಾಷ್ಟ್ರವಾಗಿರುವುದು ಅವರ ಬಯಕೆಯಾಗಿದೆ. ಕಿಮ್ ಜಂಗ್ ಉನ್ ವರ್ತನೆ ಗಮನಿಸಿದರೆ, ಉತ್ತರ ಕೊರಿಯಾ ರಕ್ಷಣಾ ಕ್ರಮ ಎನಿಸುವುದಿಲ್ಲ. ತನ್ನದು ಅಣುಶಕ್ತ ರಾಷ್ಟ್ರ ಎಂದು ತೋರಿಸಿಕೊಳ್ಳುವ ಮೂಲಕ ಯುದ್ಧೋತ್ಸಾಹ ಪ್ರದರ್ಶಿಸುತ್ತಿರುವಂತಿದೆ ಎಂದು ಹೇಳಿದ್ದಾರೆ.
ಅಣುಶಕ್ತಿ ಪ್ರದರ್ಶಿಸುವುದು ಕಿಮ್ ಜಂಗ್ ಉನ್ ಅವರ ಖಯಾಲಿಯಂತೆ ಕಾಣಿಸುತ್ತಿದೆ. ಪರಮಾಣು ಶಕ್ತ ರಾಷ್ಟ್ರಗಳು ಜವಾಬ್ದಾರಿಯನ್ನು ಹೊಂದಿರಬೇಕು. ಆದರೆ, ಕಿಮ್ ಅವರಿಗೆ ಅದು ಅರ್ಥವಾಗುತ್ತಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಅಣುಶಕ್ತ ರಾಷ್ಟ್ರ ಎನಿಸಿದ ಬಳಿ ಅನ್ಯ ದೇಶಗಳನ್ನು ಹೆದುರಿಸುವುದಕ್ಕೆ ಅದನ್ನು ಬಳಸಬಾರದು. ಅಮೆರಿಕ ರಾಷ್ಟ್ರ ಯುದ್ಧವನ್ನು ಬಯಸುವುದಿಲ್ಲ. ನಮಗದೂ ಬೇಕಾಗಿಯೂ ಇಲ್ಲ. ಆದರೆ, ನಮ್ಮ ತಾಳ್ಮೆಗೂ ಮಿತಿಯಿದೆ. ಮೈತ್ರಿಕೂಟದ ಹಿತರಕ್ಷಣೆ ಹಾಗೂ ನಮ್ಮ ಗಡಿ ರಕ್ಷಣೆ ವಿಚಾರದಲ್ಲಿ ರಾಜಿಯಾಗುವುದಿಲ್ಲ. ಈ ವರೆಗೂ ಸಹಿಸಿ ತಾಳ್ಮೆಯಿಂದ ಇದ್ದಿದ್ದಾಗಿದೆ. ಇನ್ನೂ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.
ಎಲ್ಲಾ ರೀತಿಯ ರಾಜತಾಂತ್ರಿಕ ಮಾತುಕತೆಗಳನ್ನು ಬದಿಗೊತ್ತಿ ಉತ್ತರ ಕೊರಿಯಾದೊಂದಿಗಿನ ಈ ಸಂಘರ್ಷಕ್ಕೆ ಅಂತ್ಯ ಹಾಡಬೇಕಿದೆ. ಉದ್ಧಟತನ ಪ್ರದರ್ಶಿಸುತ್ತಿರುವ ಉತ್ತರ ಕೊರಿಯಾಗೆ ತಕ್ಕ ಪಾಠ ಕಲಿಸಲು, ಬಲವಾದ ಸಂದೇಶ ರಾವಿಸಲು ವಿಶ್ವಸಂಸ್ಥೆ ತುರ್ತು ಸಭೆ ಕರೆಯಬೇಕೆಂದು ಹ್ಯಾಲಿಯವರೊಂದಿಗೆ ಫ್ರಾನ್ಸ್, ದಕ್ಷಿಣ ಕೊರಿಯಾ ಹಾಗೂ ಜಪಾನ್ ರಾಷ್ಟ್ರಗಳ ರಾಯಭಾರಿಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮನವಿ ಮಾಡಿಕೊಂಡಿದ್ದಾರೆ.