ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪ ಮಾಡುವ ಮೂಲಕ ಪಾಕಿಸ್ತಾನ ತನ್ನ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದೆ ಎಂದು ಭಾರತ ಭಾನುವಾರ ಹೇಳಿದೆ.
ಈ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಶ್ವಸಂಸ್ಥೆಯನ್ನು ಪ್ರತಿನಿಧಿಸುವ ಭಾರತದ ಖಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಅವರು, ಕಳೆದ 40 ವರ್ಷಗಳಿಂದಲೂ ವಿಶ್ವಸಂಸ್ಥೆಯಲ್ಲಿ ಚರ್ಚೆಗೆ ಬಾರದ ಕಾಶ್ಮೀರ ವಿವಾದವನ್ನು ಪ್ರಸ್ತಾಪ ಮಾಡಲು ಪಾಕಿಸ್ತಾನ ಯೋಜನೆ ರೂಪಿಸುತ್ತಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಕಳೆದ 40 ವರ್ಷಗಳಿಂದಲೂ ಕಾಶ್ಮೀರ ವಿವಾದ ಕುರಿತಂತೆ ಯಾವುದೇ ರೀತಿಯ ಔಪಚಾರಿಕ ಚರ್ಚೆಗಳು ನಡೆದಿಲ್ಲ. ಈ ಹಿಂದೆಂದೂ ಚರ್ಚೆ ನಡೆಯದ ವಿಚಾರಗಳನ್ನು ಪ್ರಸಾಪ ಮಾಡುವ ಮೂಲಕ ಪಾಕಿಸ್ತಾನ ತನ್ನ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಚರ್ಚಿಸಲು ಭಾರತಕ್ಕೆ ಜಾಗತಿಕ ಹಾಗೂ ಭವಿಷ್ಯದ ಬೆಳವಣಿಗೆಗಳ ಕುರಿತು ಸಾಕಷ್ಟು ಪ್ರಮುಖ ವಿಚಾರಗಳಿವೆ. ಭಯೋತ್ಪಾದನೆ, ಹವಾಮಾನ ಬದಲಾವಣೆ ಹಾಗೂ ಅಂತರಾಷ್ಟ್ರೀಯ ವೇದಿಕೆಯಲ್ಲಿ ವಿಶ್ವಸಂಸ್ಥೆ ಸುಧಾರಣೆಗಳಂತಹ ವಿಚಾರಗಳಿವೆ.
ವಿಶ್ವಸಂಸ್ಥೆಯನ್ನು ಭಾರತ ಅಂತರಾಷ್ಟ್ರೀಯ ವೇದಿಕೆಯೆಂದು ಪರಿಗಣಿಸುತ್ತದೆ. ನಮ್ಮ ಸಮಸ್ಯೆಗಳೂ ಅಂತರಾಷ್ಟ್ರೀಯ ಸ್ವರೂಪದ್ದಾಗಿದೆ. ವಿಶ್ವಸಂಸ್ಥೆಯಲ್ಲಿಯೂ ಸುಧಾರಣೆಗಳಿರಬೇಕು. ಇದು ಭಾರತದ ಪ್ರಮುಖ ವಿಚಾರಗಳಾಗಿವೆ. ಎರಡನೇಯದು ಭಯೋತ್ಪಾದನೆ. ಕೇವಲ ಎಷ್ಯಾ ಹಾಗೂ ಭಾರತ ದೇಶಗಳಿಗಷ್ಟೇ ಭಯೋತ್ಪಾದನೆ ಮುಖ್ಯ ವಿಚಾರವಾಗಿಲ್ಲ. ಇಡೀ ವಿಶ್ವಕ್ಕೇ ಭಯೋತ್ಪಾದನೆ ದೊಡ್ಡ ಸಮಸ್ಯೆಯಾಗಿದೆ. ಪ್ರತೀಯೊಂದು ದೇಶವೂ ಇಂದು ಭಯೋತ್ಪಾದನೆಯಿಂದ ಸಮಸ್ಯೆಯನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆ ಕೂಡ ಮೂರನೇ ಸಮಸ್ಯೆಯಾಗಿದೆ ಎಂದು ಅಕ್ಬರುದ್ದೀನ್ ತಿಳಿಸಿದ್ದಾರೆ.
ಸೋಮವಾರ ವಿಶ್ವಸಂಸ್ಥೆಯ ಮಹಾಸಭೆ ನಡೆಯಲಿದ್ದು, ಸಭೆಯಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಶಾಹಿದ್ ಖಾಕನ್ ಅಬ್ಬಾಸಿಯವರು ಪಾಲ್ಗೊಳ್ಳಲಿದ್ದಾರೆ. ಮಹಾಸಭೆಯಲ್ಲಿ ಅಬ್ಬಾಸಿಯವರು ಕಾಶ್ಮೀರ ವಿವಾದವನ್ನು ಪ್ರಸ್ತಾಪ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಪಾಕಿಸ್ತಾನ ಆಂತರಿಕ ಸಚಿವ, ಜಮ್ಮು ಮತ್ತು ಕಾಶ್ಮೀರ ವಿವಾದ, ಭದ್ರತಾ ಮಂಡಳಿಯ ಸುಧಾರಣೆ, ಭಯೋತ್ಪಾದನೆ, ಮಾನವ ಹಕ್ಕುಗಳು ಹಾಗೂ ಶಾಂತಿ ಪಾಲನೆ ಸೇರಿದಂತೆ ರಾಷ್ಟ್ರೀಯ ಹಿತಾಸಕ್ತಿ ವಿಚಾರಗಳನ್ನು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪಾಕಿಸ್ತಾನ ಪ್ರಸ್ತಾಪ ಮಾಡಲಿದ ಎಂದಿದ್ದರು.