ಪಾಕಿಸ್ತಾನ ಪ್ರಧಾನಮಂತ್ರಿ ಶಾಹಿದ್ ಖಾಕನ್ ಅಬ್ಬಾಸಿ
ನ್ಯೂಯಾರ್ಕ್: ಅಲ್ಪ-ಶ್ರೇಣಿಯ ಪರಮಾಣು ಶಸ್ತ್ರಾಸ್ತ್ರಗಳು ಪಾಕಿಸ್ತಾನದಲ್ಲಿದ್ದು, ಭಾರತೀಯ ಸೇನೆಗೆ ದಿಟ್ಟ ಉತ್ತರ ನೀಡಲು ಅವುಗಳನ್ನು ಬಳಕೆ ಮಾಡುತ್ತೇವೆಂದು ಪಾಕಿಸ್ತಾನ ಪ್ರಧಾನಮಂತ್ರಿ ಶಾಹಿದ್ ಖಾಕನ್ ಅಬ್ಬಾಸಿ ಬುಧವಾರ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ಉತ್ತರ ಕೊರಿಯಾ ಅಮೆರಿಕಾ ದೇಶಕ್ಕೆ ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಮಂತ್ರಿ ಅಬ್ಬಾಸಿ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರತೀನಿತ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪಾಗುತ್ತಿರುವ ಪಾಕಿಸ್ತಾನ, ಭಯೋತ್ಪಾದನೆ ವಿರುದ್ಧ ದನಿಯೆತ್ತಿತ್ತುವ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.
ಭಾರತೀಯ ಸೇನೆಯನ್ನು ನಿರ್ನಾಮ ಮಾಡಬಲ್ಲ ಅಲ್ಪ ಶ್ರೇಣಿಯ ಅಣ್ವಸ್ತ್ರಗಳು ಪಾಕಿಸ್ತಾನ ಬಳಿ ಸಾಕಷ್ಟಿವೆ. ಅಗತ್ಯ ಬಿದ್ದರೆ ಅದನ್ನು ಬಳಸಲು ಪಾಕಿಸ್ತಾನ ಹಿಂಜರಿಯುವುದಿಲ್ಲ. ಭಾರತ ಆರಂಭಿಸಿರುವ ಶೀತಲ ಯುದ್ಧಕ್ಕೆ ಪ್ರತಿಯಾಗಿ ನಾವು ನಮ್ಮ ಸುರಕ್ಷತೆಗಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದೇವೆಂದು ಪಾಕಿಸ್ತಾನ ಪ್ರಧಾನಿ ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ಜಾಗತಿಕವಾಗಿ ಜವಾಬ್ದಾರಿಯುತ ರಾಷ್ಟ್ರವಾಗಿದ್ದು, ತನ್ನ ಜವಾಬ್ದಾರಿಯಂತೆ ಕಳೆದ 15 ವರ್ಷಗಳಿಂದಲೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಪಾಕಿಸ್ತಾನ ಹೊಂದಿದ್ದು, ಇದರಲ್ಲಿ ಯಾವುದೇ ರೀತಿಯ ಸಂಶಯಗಳು ಬೇಡ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೇಗೆ ಬಳಕೆ ಮಾಡಬೇಕೆಂಬುದು ನಮಗೆ ಗೊತ್ತಿದೆ. 60ರ ದಶಕದಲ್ಲಿಯೇ ಪಾಕಿಸ್ತಾನಕ್ಕೆ ಪರಮಾಣು ಶಸ್ತ್ರಾಸ್ತ್ರಗಳ ಪರಿಕಲ್ಪನೆ ತಿಳಿದಿತ್ತು. ಎಷ್ಯಾದಲ್ಲಿಯೇ ಪರಮಾಣು ಪರಿಕಲ್ಪನೆ ಹೊಂದಿದ್ದ ದೇಶ ಪಾಕಿಸ್ತಾವಾಗಿದೆ. ಇದನ್ನು ಹೀಗೆಯೇ ನಿರ್ವಹಿಸಿಕೊಂಡು ಹೋಗುತ್ತೇವೆಂದು ತಿಳಿಸಿದ್ದಾರೆ.