ವಿದೇಶ

ಎನ್ಎಸ್ ಜಿ ಕನಸಿಗೆ ಚೀನಾ ಅಡ್ಡಿ ಹಿನ್ನಲೆ, ಭಾರತಕ್ಕೆ ಎಸ್ ಟಿಎ-1 ಸ್ಥಾನಮಾನ ನೀಡಿ ತಿರುಗೇಟು ನೀಡಿದ ಅಮೆರಿಕ!

Srinivasamurthy VN
ವಾಷಿಂಗ್ಟನ್: ಎನ್ ಎಸ್ ಜಿ ಸದಸ್ಯ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಲು ತನ್ನ ವಿರೋಧ ವ್ಯಕ್ತಪಡಿಸುತ್ತಿರುವ ಚೀನಾಗೆ ತಿರುಗೇಟು ನೀಡಿರುವ ಅಮೆರಿಕ, ತನ್ನ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಿದೆ.
ಈ ಬಗ್ಗೆ ಅಮೆರಿಕ ಸರ್ಕಾರ ಶುಕ್ರವಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಭಾರತಕ್ಕೆ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ವಹಿವಾಟು ನಡೆಸಬಲ್ಲ ವ್ಯೂಹಾತ್ಮಕ ವ್ಯಾಪಾರ-1 ಸ್ಥಾನಮಾನವನ್ನು ನೀಡಿದೆ. ಈ ಮೂಲಕ ನ್ಯಾಟೋ ದೇಶಗಳ ಹಾಗೆಯೇ ಭಾರತಕ್ಕೂ ಸಹ ಅಮೆರಿಕದ ಅತ್ಯುನ್ನತ ಮಿಲಿಟರಿ ಹಾಗು ನಾಗರಿಕ ತಂತ್ರಜ್ಞಾನಗಳು ಲಭಿಸಲಿವೆ. 
ಅಮೆರಿಕದ ಎಸ್‌ಟಿಎ-1 ಸ್ಥಾನಮಾನ ಪಡೆದ ಏಷ್ಯಾದ ಮೂರನೇ ರಾಷ್ಟ್ರವಾಗಿ ಭಾರತ
ಇನ್ನು ಭಾರತ ದೇಶ ಅಮೆರಿಕದ ಎಸ್‌ಟಿಎ-1 ಸ್ಥಾನಮಾನ ಪಡೆದ ಏಷ್ಯಾದ ಮೂರನೇ ರಾಷ್ಟ್ರವಾಗಿದ್ದು, ವಿಶ್ವದ  37ನೇ ದೇಶವಾಗಿದೆ. ಜಪಾನ್ ಹಾಗು ದಕ್ಷಿಣ ಕೊರಿಯಾ ಬಳಿಕ ಎಸ್‌ಟಿಎ-1 ಪಡೆದ ಏಷ್ಯಾದ ಮೂರನೇ ದೇಶ ಭಾರತವಾಗಿದೆ. ಅಣ್ವಸ್ತ್ರ ಪೂರೈಕೆದಾರ ಸಂಘ(ಎನ್‌ಎಸ್‌ಜಿ) ಸದಸ್ಯತ್ವ ಇರದ ಭಾರತಕ್ಕೆ ಈ ನಿಟ್ಟಿನಲ್ಲಿ ಟ್ರಂಪ್‌ ಸರ್ಕಾರ ಸಾಕಷ್ಟು ವಿನಾಯಿತಿ ನೀಡಿದೆ. ಸಾಮಾನ್ಯವಾಗಿ, ಜಾಗತಿಕ ಮಟ್ಟದ ಪ್ರಮುಖ ರಫ್ತು ನಿಯಂತ್ರಣ ಒಕ್ಕೂಟಗಳಾದ ಎನ್‌ಎಸ್‌ಜಿ, ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಒಕ್ಕೂಟ, ವಾಸೆನಾರ್‌ ವ್ಯವಸ್ಥೆ ಹಾಗು ಆಸ್ಟ್ರೇಲಿಯಾ ಗುಂಪಿನ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಎಸ್‌ಟಿಎ-1 ಸದಸ್ಯತ್ವ ನೀಡುವ ಪರಿಪಾಠವನ್ನು ಅಮೆರಿಕ ಬೆಳೆಸಿಕೊಂಡಿದೆ.
ಇವುಗಳ ಪೈಕಿ ಮೂರು ಸಂಘಟನೆಗಳಲ್ಲಿ ಭಾರತ ಸದಸ್ಯತ್ವ ಪಡೆದಿದ್ದು, ಇನ್ನಷ್ಟೇ ಎನ್ ಎಸ್ ಜಿ ಸದಸ್ಯತ್ವ ಪಡೆಯಬೇಕಿದೆ. ಆದರೆ ಇದಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದೆ. ಪ್ರಸ್ತುತ ಎಸ್ ಟಿಎ1 ಸ್ಥಾನಮಾನ ಪಡೆಯುವ  ಮೂಲಕ ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಬೇಕಿರುವ ವಿಶ್ವಾಸಾರ್ಹತೆ ಭಾರತಕ್ಕೆ ಇನ್ನಷ್ಟು ಹೆಚ್ಚಿದೆ. ತನ್ನ ನಿಕಟ ದೇಶ ಇಸ್ರೇಲ್‌ ಅನ್ನೂ ಕೂಡ ಹಿಂದಿಕ್ಕಿ ಭಾರತಕ್ಕೆ ಈ ಸ್ಥಾನಮಾನ ನೀಡಿರುವ ಅಮೆರಿಕ, ಚೀನಾಗೆ ಮಹತ್ವದ ರಾಜಕೀಯ ಸಂದೇಶ ರವಾನೆ ಮಾಡಿದೆ. ಅಲ್ಲದೆ ಎನ್ಎಸ್ ಜಿ ಸದಸ್ಯತ್ವ ಪಡೆಯಲು ಭಾರತ ಅಗ್ರ ಸೂಕ್ತ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದೆ.
ಇದಕ್ಕೂ ಮುನ್ನ ಅಲ್ಬೇನಿಯಾ, ಹಾಂಕಾಂಗ್‌, ಇಸ್ರೇಲ್‌, ಮಾಲ್ಟಾ, ಸಿಂಗಾಪುರ , ದಕ್ಷಿಣ ಆಫ್ರಿಕಾ ಹಾಗೂ ತೈವಾನ್‌ ದೇಶಗಳ ಜತೆಯಲ್ಲಿ ಎಸ್‌ಟಿಎ-2ರ ಸ್ಥಾನಮಾನವನ್ನು ಭಾರತಕ್ಕೆ ಅಮೆರಿಕ ನೀಡಿತ್ತು.
SCROLL FOR NEXT