ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿ ವಿರುದ್ಧ ಅದೇ ದೇಶದ ಬೃಹತ್ ಉದ್ಯಮಪತಿಗಳು ತಿರುಗಿ ಬಿದ್ದಿದ್ದಾರೆ. ಟ್ರಂಪ್ ವಲಸೆ ನೀತಿಯು ದೇಶದ ಆರ್ಥಿಕತೆಗೆ ಕಠಿಣ ಸವಾಲನ್ನೊಡ್ಡುತ್ತದೆ ಎಂದು ಅಲ್ಲಿನ ಬಹುಕೋಟಿ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು (ಸಿಇಓ) ಹೇಳಿದ್ದಾರೆ.
ಆ್ಯಪಲ್ ಸಂಸ್ಥೆಯ್ ಸಿಇಓ ಟಿಮ್ ಕುಕ್ ಸೇರಿ ಒಟ್ಟು 59 ಸಂಸ್ಥೆಗಳ ಸಿಇಓಗಳು ಟ್ರಂಪ್ ವಲಸೆ ನೀತಿಯ ಸಂಬಂಧ ಆತಂಕ ಹೊರಹಾಕಿದ್ದಾರೆ.
ಬಹುಕೋಟಿ ಉದ್ಯಮ ಸಂಸ್ಥೆಗಳ ಸಿಇಓಗಳು ತಾವು ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿದ್ದು ವೀಸಾ ನಿಯಮಾವಳಿಗಳನ್ನು ಕಠಿಣಗೊಳಿಸುವುದರಿಂದ ನಮ್ಮಲ್ಲಿನ ನೌಕರರು ತೊಂದರೆಗೊಳಗಾಗುವರು ಎಂದು ಅವರು ಹೇಳಿದ್ದಾರೆ.
ಟಿಮ್ ಕುಕ್, ಮಾರ್ಗನ್ ಚೇಸ್ ಮತ್ತು ಕಂಪನೀಸ್‌ನ ಜ್ಯಾಮಿ ಡೈಮನ್, ಅಮೆರಿಕನ್ ಏರ್‌ಲೈನ್ಸ್‌ನ ಡಗ್ ಪಾರ್ಕರ್ ಇನ್ನೂ ಮೊದಲಾದವರು ಅಮೆರಿಕಾ ಅಧ್ಯಕ್ಷರ ನೂತನ ವಲಸೆ ನೀತಿಯ ಬಗೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರರು ಟ್ರಂಪ್ ವಲಸೆ ನೀತಿಯಿಂದ ಆತಂಕಗೊಂಡಿದ್ದಾರೆ. ಇದು ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. ಅಧ್ಯಕ್ಷರ ಕ್ರಮದಿಂದ ಅವರುಗಳು ಸಂದಿಗ್ದಕ್ಕೆ ಸಿಲುಕಿದ್ದು ಅವರ ಮೇಲೆ ಹೆಚ್ಚಿನ ಒತ್ತಡ ಬಿಳುತ್ತಿದೆ. ಇದಕ್ಕಾಗಿ ಅವರು ಸರಿಯಾಗಿ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲದರಿಂದ ಸಂಸ್ಥೆಯ ಕಾರ್ಯಕ್ಷಮತೆಗೆ ಧಕ್ಕೆ ಉಂಟಾಗುತ್ತಿದೆ" ಎಂದು ಸಿಇಓಗಳ ಪತ್ರದಲ್ಲಿ ಹೇಳಲಾಗಿದೆ.
ಅಮೆರಿಕಾದ ಬ್ಯಾಂಕಿಂಗ್ ವಲಯ, ವಾಣಿಜ್ಯ ವಲಯದ ಅನೇಕ ಸಂಸ್ಥೆಗಳು ಭಾರತೀಯ ಹೊರಗುತ್ತಿಗೆ ನೌಕರರನ್ನು ಅವಲಂಬಿಸಿದ್ದು ಒಂದೊಮ್ಮೆ ಕಠಿಣ ಕಾನೂನು ಜಾರಿಯಾದಲ್ಲಿ ಇದು ಬಹುದೊಡ್ಡ ನಷ್ಟಕ್ಕೆ ಒಳಗಾಗಲಿದೆ. ಇನ್ನು ಯಾವುದೇ ನಿಯಮಾವಳಿಗಳನ್ನು ಮಧ್ಯದಲ್ಲಿಯೇ ಬದಲಿಸುವುದು ಸಾಧುವಲ್ಲ. ಹೀಗೊಮ್ಮೆ ಬದಲಿಸಿದರೆ ಅದರಿಂದ ಕೆಟ್ಟ ಪರಿಣಾಮ ಉಂತಾಗುತ್ತದೆ ಎಂದು ಪತ್ರ ಹೇಳಿದೆ.