ವಾಷಿಂಗ್ಟನ್: ಮುಂದಿನ ವಾರ ದೆಹಲಿಯಲ್ಲಿ ಭಾರತ ಮತ್ತು ಅಮೆರಿಕಾ ನಡುವೆ ನಡೆಯಲಿರುವ 2+2 ಮಾತುಕತೆ ಎರಡೂ ದೇಶಗಳ ಮಧ್ಯೆ ಆಯಕಟ್ಟಿನ ಸಹಭಾಗಿತ್ವವನ್ನು ಹೆಚ್ಚಿಸುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೇಳಿದೆ.
ಅಮೆರಿಕಾ ಸರ್ಕಾರದ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಜಿಮ್ ಮಟ್ಟಿಸ್ ಮುಂದಿನ ವಾರ ದೆಹಲಿಗೆ ಆಗಮಿಸಲಿದ್ದಾರೆ. ಇಲ್ಲಿ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಭಾರತದೊಂದಿಗೆ ಪ್ರಮುಖ ರಾಜತಾಂತ್ರಿಕ ಮತ್ತು ಭದ್ರತಾ ಆದ್ಯತೆಗಳಲ್ಲಿ ಅಮೆರಿಕಾ ಸಂಬಂಧ ವಿಸ್ತರಣೆ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಅಲ್ಲಿನ ರಕ್ಷಣಾ ಇಲಾಖೆ ವಕ್ತಾರೆ ಹೀದರ್ ನೌರ್ಟ್ ಸುದ್ದಿಗಾರರಿಗೆ ನಿನ್ನೆ ತಿಳಿಸಿದ್ದಾರೆ.
ಮಾತುಕತೆಯು ಎರಡೂ ದೇಶಗಳ ಮಧ್ಯೆ ಆಂತರಿಕ ಕಾರ್ಯತಂತ್ರ ಸಹಭಾಗಿತ್ವವನ್ನು ಸೂಚಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಭದ್ರತಾ ಪೂರೈಕೆದಾರರಾಗಿ ಭಾರತ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷರ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ಮತ್ತು ಆಡಳಿತದ ದಕ್ಷಿಣ ಏಷ್ಯಾ ಮತ್ತು ಇಂಡೋ-ಫೆಸಿಫಿಕ್ ಕಾರ್ಯತಂತ್ರಗಳಲ್ಲಿ ಅಮೆರಿಕಾ-ಭಾರತ ಕಾರ್ಯತಂತ್ರದ ಪಾಲುದಾರಿಕೆಯನ್ನು ಉಲ್ಲೇಖಿಸಲಾಗಿದೆ. ಭಾರತದೊಂದಿಗೆ ಸಹಭಾಗಿತ್ವದ ಮಾತುಕತೆಯನ್ನು ಇದಿರು ನೋಡುತ್ತಿದ್ದೇವೆ ಎಂದು ಹೀದರ್ ನೌರ್ಟ್ ಹೇಳಿದ್ದಾರೆ.