ಲಂಡನ್: ಭಾರತದ ಪಾಲಿನ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ್ರಿಟನ್ ನ ನಾನಾ ಭಾಗಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾನೆ ಎಂದು ಲಂಡನ್ ನ ಪತ್ರಿಕೆಯೊಂದು ವರದಿ ಮಾಡಿದೆ.
ಲಂಡನ್ನಿನ "ದ ಟೈಮ್ಸ್' ಪತ್ರಿಕೆ ಈ ವರದಿಯನ್ನು ಪ್ರಕಟಿಸಿದ್ದು ಬ್ರಿಟನ್ ನಲ್ಲಿ ದಾವೂದ್ ಆಸ್ತಿ ಹೊಂದಿದ್ದಾನೆ ಎನ್ನುವ ಬಗೆಗೆ ಭಾರತ ಸರ್ಕಾರ ನೀಡಿದ್ದ ಮಾಹಿತಿ ಆಧಾರದಲ್ಲಿ ಪತ್ರಿಕೆ ಈ ತನಿಖಾ ವರದಿ ಪ್ರಕಟಿಸಿದೆ. ವರದಿಯಲ್ಲಿ ಆಸ್ತಿಗಳಿಗೂ ಪಾತಕಿ ದವೂದ್ ಗೆ ಸಹ ನಿಕಟ ಸಂಪರ್ಕವಿದೆ ಎಂದು ಹೇಳಿದೆ.
ದಾವೂದ್ ನ ಬಲಗೈ ಬಂಟ ಮಹಮೂದ್ ಇಕ್ಬಾಲ್ ಮಿರ್ಚಿ ಮೆಮನ್ ಈ ಆಸ್ತಿಗಳ ಉಸ್ತುವಾರಿ ನೋಡುತ್ತಿದ್ದಾನೆ. ಡಿ ಕಂಪನಿಯ 11 ನಿರ್ದೇಶಕರಲ್ಲಿ ಒಬ್ಬನಾಗಿರುವ ಈತ ದಾವೂದ್ ಗೆ ಸಂಬಂಧಿಸಿದ ಬ್ರಿಟನ್ ಆಸ್ತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾನೆ. ಮೆಮನ್ 1993ರ ಮುಂಬೈ ಸರಣಿ ಸ್ಪೋಟ ಪ್ರಕರಣದಲ್ಲಿ ಕೂಡಾ ಭಾಗಿಯಾಗಿದ್ದ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಬ್ರಿಟನ್ ನಲ್ಲಿ ದಾವೂದ್ ಗೆ ಸೇರಿದ ಹೋಟೆಲ್, ಐಷಾರಾಮಿ ಬಂಗಲೆಗಳು, ವಾಣಿಜ್ಯ ಕಟ್ಟಡಗಳಿದೆ ಎಂದು ವರದಿಯಾಗಿದೆ.
ಈ ಹಿಂದೆ ಭಾರತವು ಬ್ರಿಟನ್ ನ ಕಂಪನೀಸ್ ಹೌಸ್ ಮತ್ತು ಲ್ಯಾಂಡ್ ರಿಜಿಸ್ಟ್ರಿಗೆ ದಾವೂದ್ ಇಬ್ರಾಹಿಂ ಒಡೆತನದ ಆಸ್ತಿ ವಿವರಗಳ ಪಟ್ಟಿಯನ್ನು ನೀಡಿತ್ತು.