ನವದೆಹಲಿ: ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ ರಕ್ಷಣಾತ್ಮಕ ರಹಿತ ಆರ್ಥಿಕ ನೆರವು ಸ್ಥಗಿತಗೊಳಿಸುವ ಮಹತ್ವದ ಮಸೂದೆಯನ್ನು ಮಂಗಳವಾರ ಅಮೆರಿಕ ಸಂಸತ್ ನಲ್ಲಿ ಮಂಡಿಸಲಾಗಿದೆ.
ಅಮೆರಿಕದ ಸೌತ್ ಕೆರೋಲಿನಾದ ಕಾಂಗ್ರೆಸ್ ಸದಸ್ಯರಾದ ಸ್ಯಾನ್ ಫೋರ್ಡ್ ಮತ್ತು ಕೆಂಟುಕೀ ಸದಸ್ಯ ಥಾಮಸ್ ಮಸ್ಸೀ ಮಸೂದೆಯನ್ನು ಮಂಡಿಸಿದ್ದು, ಇಷ್ಟು ದಿನ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ರಕ್ಷಣಾತ್ಮಕವಲ್ಲದ ನೆರವನ್ನು ಸ್ಥಗಿತಗೊಳಿಸುವ ಮಸೂದೆ ಇದಾಗಿದೆ ಎಂದು ತಿಳಿದುಬಂದಿದೆ. ಅಮೆರಿಕದ ತೆರಿಗೆದಾರರ ಹಣವನ್ನು ಪಾಕಿಸ್ತಾನದ ಅಭಿವೃದ್ಧಿಗೆ ನೀಡುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಅವರು, ಅಮೆರಿಕದ ಹಣ ಪಾಕಿಸ್ತಾನದಲ್ಲಿ ದುರ್ಬಳಕೆಯಾಗುತ್ತಿದೆ ಎಂದು ಹೇಳಿದರು.
ಅಂತೆಯೇ ಇದೇ ಹಣವನ್ನು ಅಮೆರಿಕದ ರಸ್ತೆ ಆಧುನೀಕರಣಕ್ಕೆ ಬಳಕೆ ಮಾಡಿಕೊಳ್ಳುವಂತೆ ಸದನಕ್ಕೆ ಸಲಹೆ ನೀಡಿದರು. ಪ್ರಸ್ತುತ ಇರುವ ಸರ್ಕಾರ ಅಮೆರಿಕ ನಾಗರಿಕರಿಗೆ ಮೊದಲ ಆದ್ಯತೆ ನೀಡುತ್ತಿದ್ದು,ಅದೇ ನೀತಿಯನ್ನೇ ಎಲ್ಲ ಯೋಜನೆಗಳಿಗೂ ಅನ್ವಯಿಸಬೇಕು. ಅಮೆರಿಕ ನಾಗರಿಕರು ಇತರೆ ದೇಶಗಳನ್ನು ಉತ್ತೇಜಿಸುತ್ತಾರೆಯಾದರೂ, ಭಯೋತ್ಪಾದನೆಯನ್ನಲ್ಲ. ಭಯೋತ್ಪಾದನೆಯನ್ನು ಉತ್ತೇಜಿಸುವ ರಾಷ್ಟ್ರಗಳಿಗೆ ಅಮೆರಿಕದ ಯಾವುದೇ ನೆರವು ನೀಡಬಾರದು ಎಂದು ಅವರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸೆನೆಟರ್ ರ್ಯಾಂಡ್ ಪಾಲ್ ಅವರು, ಅಮೆರಿಕದ ಆರ್ಥಿಕ ನೆರವಿನೊಂದಿಗೆ ಭಯೋತ್ಪಾದರು ಬೆಳೆಯುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆ ಗೇಡಿನ ವಿಚಾರ. ಯುದ್ಧದಲ್ಲಿ ನಮ್ಮ ಸೈನಿಕರನ್ನು ಕೊಲ್ಲುವ ಮತ್ತು ನಮ್ಮ ಧ್ವಜವನ್ನು ತುಳಿಯುವ ಮಾತನಾಡುತ್ತಿರುವ ಉಗ್ರರಿಗೆ ನಮ್ಮದೇ ಹಣ ವಿತರಣೆಯಾಗುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಇನ್ನು ಈ ಹೊಸ ಮಸೂದೆಗೆ ಅನುಮೋದನೆ ದೊರೆತಿದ್ದೇ ಆದರೆ 2026ರ ವೇಳೆಗೆ ಪಾಕಿಸ್ತಾನಕ್ಕೆ ಹೋಗಬೇಕಿದ್ದ ಸುಮಾರು 111 ಬಿಲಿಯನ್ ಡಾಲರ್ ಹಣದ ನೆರವಿಗೆ ಕತ್ತರಿ ಬೀಳಲಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics