ಟೆಹರಾನ್: ಇರಾನ್ ನಲ್ಲಿ ಭಾನುವಾರ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 66 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇರಾನ್ ನ ಆಸ್ಮಾನ್ ಏರ್ ಲೈನ್ಸ್ ಸಂಸ್ಥೆಯ ಎಟಿಆರ್ ವಿಮಾನ ಝಾಗ್ರೋಸ್ ಗುಡ್ಡಗಾಡು ಪ್ರದೇಶದಲ್ಲಿ ಪತನಕ್ಕೀಡಾಗಿದ್ದು, ವಿಮಾನದಲ್ಲಿದ್ದ ಸಿಬ್ಬಂದಿಗಳೂ ಸೇರಿದಂತೆ ಎಲ್ಲ 66 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತಕ್ಕೀಡಾದ ವಿಮಾನ ರಾಜಧಾನಿ ಟೆಹ್ರಾನ್ ನಿಂದ ಇಸ್ಫಹಾನ್ ಪ್ರಾಂತ್ಯದಲ್ಲಿನ ಯಸುಜ್ ಪಟ್ಟಣಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ನೈಋತ್ಯ ಇರಾನ್ ನಲ್ಲಿರುವ ಝಾಗ್ರೋಸ್ ಗುಡ್ಡಗಾಡು ಪ್ರದೇಶದ ಮೇಲೆ ತೆರಳುತ್ತಿದ್ದಾಗ ವಿಮಾನ ಪತನವಾಗಿದ್ದು, ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಹೆಲಿ ಆ್ಯಂಬುಲೆನ್ಸ್ ಹೆಲಿಕಾಪ್ಟರ್ ಗಳ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸ್ಥಳೀಯ ಬುಡಕಟ್ಟು ಸಮುದಾಯದ ಜನರು ತೆರವು ಕಾರ್ಯಾಚರಣೆಯಲ್ಲಿ ಸಿಬ್ಬಂದಿಗೆ ನೆರವು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯ ಅಧಿಕಾರಿಗಳು ತಿಳಿಸಿರುವಂತೆ ಪ್ರಸ್ತುತ ವಿಮಾನ ಅಪಘಾತಕ್ಕೀಡಾಗಿರುವ ಪ್ರದೇಶ ಗುಡ್ಡಗಾಡು ಪ್ರದೇಶವಾಗಿದ್ದು, ವಾಹನಗಳು ಅಥವಾ ಆ್ಯಂಬುಲೆನ್ಸ್ ಗಳು ತೆರಳಲು ಸಾಧ್ಯವಿಲ್ಲ. ಹೀಗಾಗಿ ಹೆಲಿಕಾಪ್ಟರ್ ಗಳನ್ನು ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.