ವಿದೇಶ

ದಕ್ಷಿಣ ಅಮೆರಿಕಾದಲ್ಲಿ ಭೀಕರ ಅಪಘಾತ: ಬಸ್-ಟ್ರಕ್ ಮುಖಾಮುಖಿ ಡಿಕ್ಕಿ; 48 ಮಂದಿ ದುರ್ಮರಣ

Manjula VN
ಲಿಮಾ: ದಕ್ಷಿಣ ಅಮೆರಿಕಾದ ಪೆರುವಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಪ್ರಯಾಣಿಕ ಬಸ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 48 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. 
ಪೆರು ರಾಜಧಾನಿ ಲಿಮಾದಿಂದ 130 ಕಿ.ಮೀ ದೂರದಲ್ಲಿ ಭೀಕರ ಅಪಘಾತ ಸಂಭವಿಸಿದೆ. 57 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ಟ್ರಕ್ ಗೆ ರಭಸದಿಂದ ಡಿಕ್ಕಿ ಹೊಡೆದು ಬೆಟ್ಟದ ರಸ್ತೆಯಿಂದ ಜಾರಿ ಸುಮಾರು 100 ಮೀಟರ್ ಆಳಕ್ಕೆ ತಲೆಕೆಳಗಾಗಿ ಬಿದ್ದಿದೆ. 
ಸಮುದ್ರದ ತುದಿಯಲ್ಲಿನ ಬಂಡೆಯ ಮೇಲೆ ಬಸ್ ಬಿದ್ದಿದ್ದರಿಂದಾಗಿ ಹೆಚ್ಚಿನ ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹುವಾಚೋದಿಂದ ಹೊರಟಿದ್ದ ಬಸ್ ಕಡಲತೀರದ ರಸ್ತೆಯಲ್ಲಿ ಸಾಗುವಾಗ ಈ ಭೀಕರ ಅಪಘಾತ ಸಂಭವಿಸದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು, ಮೃತದೇಹಗಳನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರ ಮಾಡಿದ್ದಾರೆ. 
ನೌಕಾಪಡೆಯ ಗಸ್ತು ದೋಣಿಗಳು ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ದಾರೆ. ಪ್ರಸ್ತುತ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಾವಳಿಯ ಹೆದ್ದಾರಿ ಇದಾಗಿದ್ದು, ಈ ಹೆದ್ದಾರಿಯಲ್ಲಿ ಬಸ್ ಮತ್ತು ಟ್ರಕ್ ಗಳು ಮಾತ್ರ ಸಂಚರಿಸುತ್ತವೆ ಎಂದು ತಿಳಿದುಬಂದಿದೆ. 
SCROLL FOR NEXT