ಪ್ಯಾಲಸ್ತೈನ್: ಜೆರುಸಲೇಂ ಮಾರಾಟಕ್ಕಿಲ್ಲ ಎಂದು ಪ್ಯಾಲೆಸ್ತೈನ್ ಅಧ್ಯಕ್ಷ ಮಹ್ಮುದ್ ಅಬ್ಬಾಸ್ ಅವರು ವಾರ್ಷಿಕ ಸಹಾಯಧನ ಕಟ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬುಧವಾರ ಟಾಂಗ್ ನೀಡಿದ್ದಾರೆ.
ಜೆರುಸಲೇಂ ಪ್ಯಾಲೆಸ್ತೈನ್ ನ ಆಂತರಿಕ ರಾಜಧಾನಿಯಾಗಿದ್ದು, ಅದನ್ನು ಚಿನ್ನಕ್ಕಾಗಿ ಅಥವಾ ಬಿಲಿಯನ್ಸ್ ಗಾಗಿ ಮಾರಾಟಕ್ಕೆ ಇಟ್ಟಿಲ್ಲ ಎಂದು ಅಬ್ಬಾಸ್ ವಕ್ತಾರ ನಬಿಲ್ ಅಬು ರುದೇನಿಯಾ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನಿನ್ನೆ ಹಣಕಾಸಿನ ನೆರವು ನಿಲ್ಲಿಸುವುದಾಗಿ ಟ್ವೀಟ್ ಮಾಡಿದ್ದ ಡೊನಾಲ್ಡ್ ಟ್ರಂಪ್ ಅವರು, ಪ್ಯಾಲೆಸ್ತೈನ್ ಗೆ ನಾವು ಪ್ರತಿ ವರ್ಷ ನೂರಾರು ಮಿಲಿಯನ್ ಡಾಲರ್ ನೆರವು ನೀಡುತ್ತಿದ್ದೇವೆ. ಈ ಬಗ್ಗೆ ಯಾವುದೇ ಮೆಚ್ಚುಗೆ ಅಥವಾ ಗೌರವ ನೀಡುತ್ತಿಲ್ಲ. ಹೀಗಾಗಿ ನಾವು ಪ್ರತಿ ವರ್ಷ 300 ಮಿಲಿಯನ್ ನೆರವು ಏಕೆ ನೀಡಬೇಕು ಎಂದು ಪ್ರಶ್ನಿಸಿದ್ದರು.
'ಶಾಂತಿ ಮಾತುಕತೆಗೆ ಮರಳುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ನಿರ್ಣಯಗಳ ಆಧಾರದ ಮೇಲೆ ಪೂರ್ವ ಜೆರುಸಲೇಂ ಪ್ಯಾಲೆಸ್ತೈನ್ ನ ಸ್ವತಂತ್ರ ರಾಜಧಾನಿಯಾಗಬೇಕು ಎಂದು ಅಬು ರುದೇನಿಯಾ ಅವರು ಹೇಳಿದ್ದಾರೆ.