ಇಸ್ಲಾಮಾಬಾದ್: ಉಗ್ರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ತಾನು ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮಾನತು ಮಾಡಿದ ಬೆನ್ನಲ್ಲೇ ಭಾರತದ ವಿರುದ್ಧ ಕೆಂಡಕಾರಿರುವ ಪಾಕಿಸ್ತಾನ ಅಮೆರಿಕ ನಿರ್ಧಾರಕ್ಕೆ ಭಾರತವೇ ಕಾರಣ ಎಂದು ಆರೋಪಿಸಿದೆ.
ಈ ಬಗ್ಗೆ ಪಾಕಿಸ್ತಾನ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಲ್ಲಿನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಅವರು, ಭಾರತ ಹೇಳಿರುವ ಸುಳ್ಳುಗಳನ್ನೇ ನಂಬಿ ಅಮೆರಿಕ ನಿಲುವು ತಳೆಯುತ್ತಿದ್ದು, ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಕಿಡಿಕಾರಿದ್ದಾರೆ.
"ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ವಿರುದ್ಧ ತಿರುಗಿ ಬೀಳಲು ಭಾರತದ 'ಸುಳ್ಳು ಪ್ರತಿಪಾದನೆಗಳೇ' ಕಾರಣ. ಭಾರತ ಹೇಳಿ ಕೊಟ್ಟಿರುವುದನ್ನೇ ಅಮೆರಿಕ ನಂಬಿರುವ ಅಮೆರಿಕ ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಆ ಎರಡೂ ದೇಶಗಳು ಪರಸ್ಪರ ಕೈಜೋಡಿಸಿದ್ದು, ಇದೇ ಕಾರಣಕ್ಕೆ ಅಮೆರಿಕ ಈಗ ಭಾರತದ ಭಾಷೆಯಲ್ಲಿ ಮಾತನಾಡುತ್ತಿದೆ. ಅಮೆರಿಕ ಮತ್ತು ಭಾರತ ಈ ಪ್ರಾಂತ್ಯದಲ್ಲಿ ಸಮಾನ ಹಿತಾಸಕ್ತಿಗಳನ್ನು ಹೊಂದಿದ್ದು, ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಖ್ವಾಜಾ ಆಸಿಫ್ ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತ್ರವಲ್ಲ..ಅಮೆರಿಕ ಸರ್ಕಾರದ ನಿಲುವು ಪ್ರಕಟವಾದ ಬೆನ್ನಲ್ಲೇ ನಡೆದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲೂ ಆಸಿಫ್ ಇದೇ ರೀತಿಯ ಹೇಳಿಕೆ ನೀಡಿದ್ದು, ಹೊಸ ವರ್ಷದ ಮೊದಲ ದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಲು ಈ ಸಭೆ ನಡೆಸಲಾಗಿತ್ತು. ಈ ವೇಳೆ ಮಾತನಾಡಿದ್ದ ಖ್ವಾಜಾ ಆಸಿಫ್, 'ಜಗತ್ತು ಬಹಳ ವಿಶಾಲವಾಗಿದೆ. ಅಮೆರಿಕವೇನೂ ನಮಗೆ ಊಟ ಹಾಕುತ್ತಿಲ್ಲ, ಅವರು ನಮ್ಮ ಆಗಸವನ್ನು ಉಚಿತವಾಗಿ ಬಳಸಿಕೊಂಡಿದ್ದಾರೆ. ಹಿಂದಿನ ಆಡಳಿತಗಾರರು ಅಮೆರಿಕ ಹಿತ ಬಲಪಡಿಸುವುದಕ್ಕಾಗಿ ನಮ್ಮ ನೆಲ ಮತ್ತು ಹಿತಾಸಕ್ತಿಗಳನ್ನು ಮಾರಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಸಹಕರಿಸುತ್ತಿರುವುದಕ್ಕಾಗಿ ಅಮೆರಿಕ 900 ಕೋಟಿ ಡಾಲರ್‌ಗಳನ್ನು ಪಾಕಿಸ್ತಾನಕ್ಕೆ ನೀಡಬೇಕಿದೆ ಎಂದೂ ಸಚಿವ ಆಸಿಫ್ ಹೇಳಿದ್ದರು.
ಇನ್ನು ಈ ಹಿಂದೆ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಟ್ವೀಟ್ ವಿಚಾರ ಹೊರ ಬೀಳುತ್ತಿದ್ದಂತೆಯೇ ಅಮೆರಿಕ ಪಾಕಿಸ್ತಾನಕ್ಕೆ ನೀಡುವುದಾಗಿ ಘೋಷಿಸಿದ್ದ 22.5 ಕೋಟಿ ಡಾಲರ್ ನೆರವನ್ನು ಅಮೆರಿಕ ತಡೆಹಿಡಿದಿತ್ತು. ಅಲ್ಲದೆ ಪಾಕಿಸ್ತಾನಕ್ಕೆ ನೀಡಬೇಕಿದ್ದ ಒಟ್ಟು 110 ಕೋಟಿ ಡಾಲರ್ ಮಿಲಿಟರಿ ನೆರವನ್ನು ಕೂಡ ಸ್ಥಗಿತಗೊಳಿಸಿತ್ತು. ತಾನು ನೀಡುತ್ತಿರುವ ಆರ್ಥಿಕ ನೆರವನ್ನು ಪಾಕಿಸ್ತಾನ ಉಗ್ರರ ಪೋಷಣೆಗೆ ಬಳಸುತ್ತಿದೆ ಎಂದು ಅಮೆರಿಕ ದೂಷಿಸಿತ್ತು.