ಅಮೆರಿಕ ಅಧ್ಯ.ಕ್ಷ ಟ್ರಂಪ್ ಹಾಗೂ ಪಾಕ್ ಪ್ರಧಾನಿ ಅಬ್ಬಾಸಿ (ಸಂಗ್ರಹ ಚಿತ್ರ)
ವಾಷಿಂಗ್ಟನ್: ಪ್ರಮುಖ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಅಮೆರಿಕ ಸೆನೆಟ್ ಗೆ ಮಾಹಿತಿ ನೀಡಿರುವ ಅಮೆರಿಕ ಕಾರ್ಯದರ್ಶಿ ಹೀದರ್ ನೌರ್ಟ್ ಅವರು, ಪಾಕಿಸ್ತಾನ ಉಗ್ರರ ಪರ ತನ್ನ ನಿಲುವನ್ನು ಬದಲಿಸಿಕೊಳ್ಳುವವರೆಗೂ ಇಂತಹ ಕ್ರಮಗಳು ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
"ಪಾಕಿಸ್ತಾನ ಎಲ್ಲಿಯವರೆಗೂ ತನ್ನ ಉಗ್ರರ ಪರ ನಿಲುವನ್ನು ಮುಂದುವರೆಸುತ್ತದೆಯೋ, ಎಲ್ಲಿಯವರೆಗೂ ಉಗ್ರರ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಮುಂದಾಗುವುದಿಲ್ಲವೋ ಅಲ್ಲಿಯವರೆಗೂ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕ ತನ್ನ ಕಠಿಣ ನಿಲುವನ್ನು ಮುಂದುವರೆಸಲಿದೆ. ಪಾಕಿಸ್ತಾನದಲ್ಲಿ ಬಲವಾಗಿ ಬೇರು ಬಿಟ್ಟಿರುವ ಆಫ್ಘಾನಿಸ್ತಾನ ಮೂಲದ ತಾಲಿಬಾನ್ ಉಗ್ರ ಸಂಘಟನೆ ಮತ್ತು ಹಖ್ಖಾನಿ ನೆಟ್ ವರ್ಕ್ ವಿರುದ್ಧ ಪಾಕಿಸ್ತಾನ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕು. ಹೀಗಾಗಿ ಪ್ರಸ್ತುತ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.
ಉಗ್ರ ಪೀಡಿತ ರಾಷ್ಟ್ರಗಳಿರುವ ಕಣ್ಗಾವಲು ರಾಷ್ಟ್ರಗಳ ಪಟ್ಟಿಗೆ ಪಾಕಿಸ್ತಾನ ಸೇರ್ಪಡೆ
ಇನ್ನು ಪಾಕಿಸ್ತಾನಕ್ಕೆ ನೀಡಿದ್ದ ವಿಶೇಷ ಭದ್ರತಾ ನೆರವು ಅಮಾನತು ಮಾತ್ರವಲ್ಲ, ಅಂತೆಯೆ ಪಾಕಿಸ್ತಾನವನ್ನು ಅಮೆರಿಕದ ಉಗ್ರ ಪೀಡಿತ ರಾಷ್ಟ್ರಗಳಿರುವ ವಿಶೇಷ ಕಣ್ಗಾವಲು ರಾಷ್ಟ್ರಗಳ ಪಟ್ಟಿಗೂ ಸೇರಿಸಲಾಗಿದೆ. ಆ ಮೂಲಕ ಪಾಕಿಸ್ತಾನ ಪ್ರತಿಯೊಂದು ನಡೆಯನ್ನೂ ಅಮೆರಿಕದ ವಿಶೇಷ ಪಡೆಗಳು ವೀಕ್ಷಣೆ ಮಾಡಲಿವೆ. ಪಾಕಿಸ್ತಾನದಲ್ಲಿ ನಡೆಯುವ ಧಾರ್ಮಿಕ ಹಿಂಸಾಚಾರ, ಧಾರ್ಮಿಕ ಸ್ವಾತಂತ್ರ್ಯ ಹರಣದಂತಹ ಪ್ರಕರಣಗಳ ವರದಿಯನ್ನು ಈ ತಂಡ ಮಾಡಲಿದೆ. ಅಂತೆಯೇ ಅಮೆರಿಕ ಈ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಪಟ್ಟಿಯಲ್ಲಿ ಬರ್ಮಾ, ಚೀನಾ, ಎರಿಟ್ರಿಯಾ, ಇರಾನ್, ಉತ್ತರ ಕೊರಿಯಾ, ಸುಡಾನ್, ಸೌದಿ ಅರೇಬಿಯಾ, ತಜಕಿಸ್ತಾನ್, ತುರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ರಾಷ್ಟ್ರಗಳ ಹೆಸರುಗಳು ಮುಂದುವರೆದಿವೆ.
ಇನ್ನು ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ವಿರುದ್ಧ ಟ್ವಿಟರ್ ನಲ್ಲಿ ಕಿಡಿಕಾರಿದ್ದರು. ಇಷ್ಟು ವರ್ಷಗಳ ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವು ವ್ಯರ್ಥವಾಗಿದ್ದು, ಉಗ್ರರ ವಿರುದ್ಧ ಆ ದೇಶ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಸುಳ್ಳು ಹೇಳಿಕೊಂಡು ನಮ್ಮನ್ನು ಮೂರ್ಖರನ್ನಾಗಿ ಮಾಡಿತ್ತು. ಆದರೆ ಇನ್ನುಮುಂದೆ ಅದು ನಡೆಯುವುದಿಲ್ಲ ಎಂದು ಮೊದಲೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.