ವಾಷಿಂಗ್ ಟನ್ : ಅಪ್ಘಾನಿಸ್ತಾನದ ಗಡಿ ಪ್ರದೇಶದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ಹಾಗೂ ಪಾಕಿಸ್ತಾನವನ್ನು ತಮ್ಮ ಕಾರ್ಯಾಚರಣೆಯ ಕೇಂದ್ರವನ್ನಾಗಿ ಬಳಸಿಕೊಳ್ಳುತ್ತಿರುವ ತಾಲಿಬಾನ್ ಸಂಘಟನೆಯ ಮುಖಂಡರನ್ನು ತಕ್ಷಣದಿಂದಲೇ ಬಂಧಿಸುವಂತೆ ಅಥವಾ ಹೊರ ಹಾಕುವಂತೆ ಪಾಕಿಸ್ತಾನಕ್ಕೆ ಅಮೆರಿಕಾ ಕಟ್ಟಾಜ್ಞೆ ವಿಧಿಸಿದೆ.
ಕಾಬೂಲಿನ ಇಂಟರ್ ಕಾಂಟಿನೆಂಟಲ್ ಹೋಟೆಲ್ ಮೇಲೆ ಭಾನುವಾರ ನಡೆದಿದ್ದ ದಾಳಿ ಹೊಣೆಯನ್ನು ತಾಲಿಬಾನ್ ಸಂಘಟನೆ ಹೊತ್ತುಕೊಂಡ ನಂತರ ವೈಟ್ ಹೌಸ್ ನಿಂದ ಈ ಹೇಳಿಕೆ ಹೊರಬಿದ್ದಿದೆ. ಹೋಟೆಲ್ ದಾಳಿ ವೇಳೆ 22 ಜನರು ಮೃತಪಟ್ಟಿದ್ದರು.
ತಾಲಿಬಾನ್ ಮುಖಂಡರನ್ನು ಕೂಡಲೇ ಬಂಧಿಸುವಂತೆ ಅಥವಾ ದೇಶದಿಂದ ಹೊರ ಹಾಕುವಂತೆ . ಉಗ್ರ ಚಟುವಟಿಕೆಗಳಿಗೆ ಪಾಕಿಸ್ತಾನವನ್ನು ನೆಲೆಯನ್ನಾಗಿ ಬಳಸಿಕೊಳ್ಳುತ್ತಿರುವುದನ್ನು ನಿಯಂತ್ರಿಸುವಂತೆ ಪಾಕಿಸ್ತಾನಕ್ಕೆ ಸೂಚನೆ ನೀಡಲಾಗಿದೆ ಎಂದು ವೈಟ್ ಹೈಸ್ ವಾರ್ತಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾಗರಿಕರ ಮೇಲಿನ ಇಂತಹ ದಾಳಿಗಳು ಖಂಡನೀಯವಾಗಿದ್ದು, ಅಪ್ಘಾನಿಸ್ತಾನ ಭದ್ರತಾಪಡೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಾರಾ ಸ್ಯಾಂಡರ್ಸ್ ಹೇಳಿದ್ದಾರೆ.