ವಿದೇಶ

ಭಾರತದಲ್ಲಿ ಧರ್ಮಾಧಾರಿತ ತಾರತಮ್ಯಕ್ಕೆ ಅವಕಾಶವಿಲ್ಲ: ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಸುರೇಶ್ ಪ್ರಭು

Srinivasamurthy VN
ದಾವೋಸ್: ಭಾರತದಲ್ಲಿ ಧರ್ಮಾಧಾರಿತ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಸ್ವಿಟ್ಜರ್ಲೆಂಡ್ ನ ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ 'ವಿಶ್ವದಲ್ಲಿ ಭಾರತದ ಪಾತ್ರ' ಎಂಬ ವಿಚಾರದ ಕುರಿತು ಮಾತನಾಡಿದ ಸುರೇಶ್ ಪ್ರಭು, ಪ್ರಸ್ತುತ ಭಾರತದಲ್ಲಿರುವ ಸರ್ಕಾರದ ಅವಧಿಯಲ್ಲಿ  ಧರ್ಮಾಧಾರಿತ ತಾರತಮ್ಯಕ್ಕೆ ಅವಕಾಶವಿಲ್ಲ. ಒಂದು ವೇಳೆ ಇಂತಹ ತಾರತಮ್ಯವಿದ್ದಿದ್ದರೆ, ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ತ್ರಿವಳಿ ತಲಾಖ್ ಮಸೂದೆ ಮಂಡನೆಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
'ಅಭಿವೃದ್ಧಿಯ ಫಲ ದೇಶದ ಪ್ರತೀಯೊಬ್ಬ ನಾಗರೀಕನಿಗೂ ತಲುಬೇಕು. ಒಂದು ವೇಳೆ ಕೇಂದ್ರ ಸರ್ಕಾರ ಒಂದು ಕೋಮು ಅಥವಾ ಸಮುದಾಯದ ವಿರುದ್ಧವಾಗಿದ್ದರೆ, ಈ ಸರ್ಕಾರವೇಕೆ ತ್ರಿವಳಿ ತಲಾಖ್ ಅನ್ನು ಮಂಡನೆ  ಮಾಡುತ್ತಿತ್ತು ಎಂದು ಪ್ರಭು ಪ್ರಶ್ನಿಸಿದರು. ದೇಶದಲ್ಲಿ ಶೇ.14ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದು, ಈ ಪೈಕಿ ಶೇ.7ರಷ್ಟು ಮುಸ್ಲಿಂ ಮಹಿಳೆಯರಿದ್ದಾರೆ. ನಿಜಕ್ಕೂ ಸರ್ಕಾರ ಮುಸ್ಲಿಂ ವಿರೋಧಿಯಾಗಿದ್ದರೆ ಮುಸ್ಲಿಂ ಮಹಿಳೆಯರ ರಕ್ಷಣೆಗಾಗಿ  ತ್ರಿವಳಿ ತಲಾಖ್ ಮಸೂದೆ ಮಂಡಿಸುತ್ತಿರಲಿಲ್ಲ. 
ನಾವು ಎಂದಿಗೂ ಧರ್ಮವನ್ನು ಚುನಾವಣೆಯ ತಂತ್ರವಾಗಿ ಬಳಸಿಕೊಂಡಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕೂಡ ಯಥೇಚ್ಛ ಪ್ರಮಾಣದಲ್ಲಿ ನಮ್ಮನ್ನು ಬೆಂಬಲಿಸಿ ಮತ ನೀಡಿದೆ. ಅಲ್ಪ ಸಂಖ್ಯಾತರ  ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೂ ನಾವು ಜಯಿಸಿದ್ದೇವೆ. ಇದು ನಮ್ಮಲ್ಲಿ ಧರ್ಮಾಧಾರಿತ ತಾರತಮ್ಯಕ್ಕೆ ಅವಕಾಶವಿಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ. ಬುಹಶಃ ಧರ್ಮಾಧಾರಿತ ತಾರತಮ್ಯ ಮಾಡದ ಸರ್ಕಾರಗಳಲ್ಲಿ ನಮ್ಮದೇ  ಮೊದಲ ಸರ್ಕಾರವಿರಬೇಕು. ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ಧರ್ಮಾಧಾರಿತ ರಾಜಕೀಯ ಮಾಡಿಲ್ಲ, ಭಾರತದ ಪ್ರತೀಯೊಬ್ಬ ಪ್ರಜೆಯೂ ದೇಶದ ಸಂವಿಧಾನ ಬದ್ಧ ಎಲ್ಲ ಹಕ್ಕುಗಳನ್ನು ಹೊಂದಿದ್ದಾನೆ. ಭಾರತೀಯ  ಪ್ರಜೆಗಳನ್ನು ಯಾವುದೇ ಕಾರಣಕ್ಕೂ ಧರ್ಮದ ಆಧಾರದ ಮೇಲೆ ವಿಭಜಿಸಬಾರದು ಎಂದು ಸುರೇಶ್ ಪ್ರಭು ಹೇಳಿದ್ದಾರೆ.
SCROLL FOR NEXT