ವಿದೇಶ

ದಾವೋಸ್ ನಲ್ಲಿ ಮೂವರು ಭಾರತೀಯರು ಸೇರಿ '15 ಹೊಸ ಗೆಳೆಯರನ್ನು' ಗಳಿಸಿದ ಟ್ರಂಪ್!

Lingaraj Badiger
ದಾವೋಸ್: ಭಾರತೀಯ ಮೂಲದ ಮೂವರು ಸೇರಿದಂತೆ ತಾವು 15 ಹೊಸ ಗೆಳೆಯರನ್ನು ಸಂಪಾದಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಾವೋಸ್ ನ ತುಂಬಿದ ಸಭೆಯಲ್ಲಿ ಘೋಷಿಸಿದ್ದಾರೆ.
ವಿಶ್ವ ಆರ್ಥಿಕ ವೇದಿಯ ವಾರ್ಷಿಕ ಶೃಂಗಸಭೆಯ ಕೊನ ದಿನ ಸುಮಾರು 20 ನಿಮಿಷಗಳ ಕಾಲ ಮಾತನಾಡಿದ ಟ್ರಂಪ್, ಇಲ್ಲಿ ನಾನು 15 ಹೊಸ ಗೆಳೆಯರನ್ನು ಗಳಿಸಿದ್ದೇನೆ. ಗುರುವಾರ ರಾತ್ರಿ ಊಟಕ್ಕೆ ಮುನ್ನ ಈ 15 ಜನ ಯಾರು ಅಂತ ನನಗೆ ಗೊತ್ತಿರಲಿಲ್ಲ. ಆದರೆ ಈಗ ಅವರು ನನ್ನ ನಿಜವಾದ ಸ್ನೇಹಿತರು ಎಂದರು.
ಕಳೆದ ರಾತ್ರಿ ನಾನು 15 ಉದ್ಯಮಿಗಳೊಂದಿಗೆ ಊಟ ಮಾಡಿದೆ. ಅವರು ಒಬ್ಬಬ್ಬರಾಗಿ ತಮ್ಮನ್ನು ತಾವು ಪರಿಚಯ ಮಾಡಿಕೊಂಡರು. ಅವರೆಲ್ಲರೂ ತುಂಬಾ ಪ್ರಭಾವಿ ಉದ್ಯಮಿಗಳಾಗಿದ್ದು, ವಿಶ್ವ ಆರ್ಥಿಕ ವೇದಿಕೆ ಅವರನ್ನು ಒಟ್ಟಿಗೆ ಸೇರಿಸಿದೆ ಎಂದರು.
ಭಾರತೀಯ ಮೂಲದ ಉದ್ಯಮಿ ವಾಸ್ ನರಸಿಂಹನ್ ನೋಕಿಯಾ ಸಿಇಒ ರಾಜೀವ್ ಸುರಿ ಮತ್ತು ಡೆಲೊಯಿಟ್ ಉದ್ಯಮಿ ಪುನಿತ್ ರಂಜೆನ್ ಅವರು ಟ್ರಂಪ್ ಜೊತೆ ಡಿನ್ನರ್ ಮಾಡಿದ್ದರು.
ವ್ಯಾಪಾರಕ್ಕೆ ಅಮೆರಿಕ ಮುಕ್ತ ಅವಕಾಶ ನೀಡಿದೆ. ಅಮೆರಿಕವೇ ಮೊದಲು ಎಂದರೆ ಅಮೆರಿಕಕ್ಕೆ ಮಾತ್ರವೇ ಅವಕಾಶ ಎಂದಲ್ಲ. ಅಲ್ಲಿ ಇತರರಿಗೂ ವ್ಯಾಪಾರ, ಉದ್ಯೋಗಕ್ಕೆ ಅವಕಾಶಗಳು ಇವೆ. ಮುಕ್ತ ವ್ಯಾಪಾರಕ್ಕೂ ನಮ್ಮ ಬೆಂಬಲವಿದೆ. ಉದ್ಯೋಗ ನಡೆಸಲೂ ಮುಕ್ತ ವಾತಾವರಣ ಇದೆ. ವಿಶ್ವದ ಎಲ್ಲರಿಗೂ ಅವಕಾಶಗಳು ಸಿಗುವಂತಾಗಬೇಕು ಎಂದು ಟ್ರಂಪ್‌ ಹೇಳಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶೃಂಗದಲ್ಲಿ ಭಾಷಣ ಮಾಡಿದ್ದ ವೇಳೆ ವಿಶ್ವದ ರಾಷ್ಟ್ರಗಳು ಅನುಸರಿಸುತ್ತಿರುವ ಸ್ವರಕ್ಷಣಾ ಆರ್ಥಿಕ ನೀತಿ ಬಗ್ಗೆ ಪ್ರಸ್ತಾಪ ಮಾಡಿದ್ದರು.
ಇದೇ ವೇಳೆ, ಅಫ್ಘಾನಿಸ್ತಾನ ಮತ್ತೆ ಉಗ್ರರ ತಾಣವಾಗಲು ಬಿಡುವುದಿಲ್ಲ ಎಂದು ಹೇಳಿದ ಟ್ರಂಪ್‌, ವಿಶ್ವದ ಯಾವುದೇ ಭಾಗದಲ್ಲಿ ಉಗ್ರವಾದದ ವಿರುದ್ಧ ಹೋರಾಟ ನಡೆಸಲು ಅಮೆರಿಕ ಸಿದ್ಧ. ಅಮೆರಿಕ ಮತ್ತು ಅಲ್ಲಿನ ಪ್ರಜೆಗಳ ಹಿತಾಸಕ್ತಿ ಕಾಪಾಡಲೆಂದೇ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.
SCROLL FOR NEXT