ವಿದೇಶ

'ಜರ್ಮನಿ ರಷ್ಯಾ ಅಧೀನದಲ್ಲಿದೆ': ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಗಂಭೀರ ಆರೋಪ

Srinivasamurthy VN
ಬ್ರುಸೆಲ್ಸ್: ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ನಲ್ಲಿ ನಡೆಯುತ್ತಿರುವ ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜರ್ಮನ್ ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.
ನ್ಯಾಟೋ ಮಿತ್ರ ರಾಷ್ಟ್ರಗಳ ಪ್ರಮುಖರು ಪಾಲ್ಗೊಂಡಿರುವ 2 ದಿನಗಳ ನ್ಯಾಟೋ ಶೃಂಗಸಭೆ ಕೆಲ ಬಿಸಿ ಬಿಸಿ ಘಟನೆಗಳಿಗೆ ಸಾಕ್ಷಿಯಾಗಿದೆ. ರಷ್ಯಾ ವಿಚಾರಕ್ಕೆ ಸಂಬಂಧಿಸಿದಂತೆ ಜರ್ಮನಿ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಭೆಯಲ್ಲಿ ತೀವ್ರ ಗರಂ ಆಗಿದ್ದರು. ಸಭೆಯಲ್ಲಿ ಮಾತನಾಡಿದ ಅವರು, ಜರ್ಮನಿ ರಷ್ಯಾ ಅಧೀನದಲ್ಲಿದ್ದು, ರಷ್ಯಾ ಅಡಿಯಾಳಿನಂತ ವರ್ತಿಸುತ್ತಿದೆ ಎಂದು ತೀವ್ರ ಟೀಕಾ ಪ್ರಹಾರ ನಡೆಸಿದರು. ಅಲ್ಲದೆ ಕೂಡಲೇ ಜರ್ಮನಿ ತನ್ನ ರಕ್ಷಣಾ ವೆಚ್ಚದ ಕುರಿತು ಕೂಡಲೇ ಗಮನ ಹರಿಸುವ ಅಗತ್ಯವಿದೆ ಎಂದು ಟೀಕಿಸಿದರು.
ಅಲ್ಲದೆ ನ್ಯಾಟೋ ಮಿತ್ರಕೂಟದಲ್ಲಿರುವ ಯೂರೋಪಿಯನ್ ದೇಶಗಳು ಅಮೆರಿಕಕ್ಕೆ ರಕ್ಷಣಾ ವೆಚ್ಚ ನೀಡಬೇಕು. ದಶಕಗಳಿಂದ ಅಮೆರಿಕ ಸೇನೆ ನ್ಯಾಟೋ ಒಕ್ಕೂಟದ ದೇಶಗಳಿಗೆ ಸೇವೆ ಸಲ್ಲಿಸುತ್ತಿದೆ. ಹೀಗಾಗಿ ಅದಕ್ಕೆ ವೆಚ್ಚ ನೀಡಬೇಕು ಎಂದು ಹೇಳಿದರು. 
ಡೊನಾಲ್ಡ್ ಟ್ರಂಪ್ ಅವರ ಮಾತಿಗೆ ತಿರುಗೇಟು ನೀಡಿದ ಜರ್ಮನ್ ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ಅವರು, ಕ್ರಿಮ್ವಿನ್ ಪ್ರಾಬಲ್ಯದಲ್ಲಿ ಹೇಗೆ ವ್ಯವಹರಿಸಬೇಕು ಎಂಬುದು ನಮಗೆ ತಿಳಿದಿದೆ. ಜರ್ಮನಿ ತನ್ನ ನೀತಿಗಳನ್ನು ತಾನೇ ರಚಿಸಲು ಸ್ವತಂತ್ರವಾಗಿದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.
ಇನ್ನು ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆಗೆ ಯೂರೋಪಿಯನ್ ದೇಶಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಇನ್ನು ಪ್ರಮುಖ ವಿಚಾರವೆಂದರೆ ಟ್ರಂಪ್ ಮತ್ತು ಮಾರ್ಕೆಲ್ ನಡುವಿನ ವಾಕ್ಸಮರದ ವೇಳೆ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟಾಲ್ಟೆನ್ಬರ್ಗ್ ಕೂಡ ಉಪಸ್ಥಿತರಿದ್ದರು.
SCROLL FOR NEXT