ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ಮೇ ನಲ್ಲಿ "ಫೆಕು " ಪದವನ್ನು ಗೂಗಲ್ ಮಾಡಿದರೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ತೋರಿಸುತ್ತಿದ್ದ ಕಾರಣಕ್ಕೆ ಸುದ್ದಿಯಾಗಿದ್ದ ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ಇದೀಗ ಮತ್ತೆ ಇದೇ ರೀತಿಯ ಸುದ್ದಿಗೆ ಗ್ರಾಸವಾಗಿದೆ. ಆದರೆ ಈ ಬಾರಿ ಮೋದಿ ಬದಲಿಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿತ್ರ ಸುದ್ದಿಯ ಕೇಂದ್ರವಾಗಿದೆ.
ನೀವೇನಾದರೂ ಗೂಗಲ್ ನಲ್ಲ್ ’ಈಡಿಯಟ್’ ಎಂದು ಹುಡುಕಿದರೆ ಗೂಗಲ್ ನಿಮಗೆ ಅಮೆರಿಕಾ ಅಧ್ಯಕ್ಷರ ಚಿತ್ರವನ್ನು ತೋರಿಸುತ್ತದೆ!
ಇತ್ತೀಚೆಗೆ ಆನ್ ಲೈನ್ ಕಾರ್ಯಕರ್ತರು ನಡೆಸಿದ ಅಭಿಯಾನದ ಫಲವಾಗಿ ’ಈಡಿಯಟ್’ ಎನ್ನುವ ಪದಕ್ಕೆ ಟ್ರಂಪ್ ಚಿತ್ರವನ್ನು ಸಂಪರ್ಕಿಸಲಾಗಿದೆ ಎಂದು ಸಿಎನ್ಇಟಿ ಗುರುವಾರ ವರದಿ ಮಾಡಿದೆ.
ದಿ ಗಾರ್ಡಿಯನ್ ಈ ವಾರದ ಆವೃತ್ತಿಯಲ್ಲಿ ವರದಿ ಮಾಡಿದ್ದಂತೆ ರೆಡ್ಡಿಟ್ ಬಳಕೆದಾರರು ಟ್ರಂಪ್ ಭಾವಚಿತ್ರ ಹಾಗೂ ಈಡಿಯಟ್ ಎನ್ನುವ ಪದವನ್ನು ಸಂಪರ್ಕಿಸಿರುವ ಪೋಸ್ಟ್ ಒಂದನ್ನು ಹಾಕುವ ಮೂಲಕ ಈ ಪ್ರವೃತ್ತಿ ಪ್ರಾರಂಭವಾಯಿತು.
ಯುಎಸ್ ಅಧ್ಯಕ್ಷರ ಚಿತ್ರಗಳೊಂದಿಗೆ "ಈಡಿಯಟ್" ಎಂಬ ಪದವನ್ನು ಲಿಂಕ್ ಮಾಡುವ ಅಭಿಯಾನವು ಆನ್ ಲೈನ್ ಪ್ರತಿಭಟನೆಯ ಸ್ವರೂಪವನ್ನು ಪಡೆದಿದ್ದು ಟ್ರಂಪ್ ನೀತಿಗಳ ಬಗ್ಗೆ ಅಸಂತುಷ್ಟರಾಗಿರುವ ಜನರು ಈ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ.
ಕಳೆದ ಮೇನಲ್ಲಿ "ಪಪ್ಪು" ಹೆಸರಿನ ಗೂಗಲ್ ಹುಡುಕಾಟವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಬಂಧಿಸಿದ ವಿವರಗಳನ್ನು ತೋರಿಸುತ್ತಿದ್ದದ್ದು ವಿವಾದಕ್ಕೆಡೆಮಾಡಿತ್ತು. ಅಲ್ಲದೆ ಅದೇ ವೇಳೆ "ಫೇಕು" ಪದಕ್ಕೆ ಮೋದಿ ಸಂಬಂಧಿತ ವಿಷಯ ತೋರಿಸುತ್ತಿದ್ದದ್ದು ಸಹ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನುವುದನ್ನು ನಾವಿಲ್ಲಿ ಸ್ಮರಿಸಬಹುದು.