ಭಾರತೀಯ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ
ಒಲಾಥೆ (ಕನ್ಸಾಸ್): ಜನಾಂಗೀಯ ದ್ವೇಷದಿಂದ ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಿ ಬಂಧನಕ್ಕೊಳಗಾಗಿರುವ ಹಂತಕನಿಗೆ 50 ವರ್ಷ ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಶ್ರೀನಿವಾಸ್ ಕುಚಿಬೋಟ್ಲಾ ಅವರ ಹತ್ಯೆ ಪ್ರಕರಣ ಸಂಬಂಧ ಆ್ಯಡಂ ಪುರಿಂಟನ್ ವಿರುದ್ಧ ಈಗಾಗಲೇ ಆರೋಪ ಸಾಬೀತಾಗಿದ್ದು, ಪ್ರಕರಣ ಕುರಿತು ಮೇ.4 ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಆಡ್ಯಂ ದೋಷಿ ಎಂದು ಈಗಾಗಲೇ ಸಾಬೀತಾಗಿರುವುದರಿಂದ ಹಂತಕನಿಗೆ 50 ವರ್ಷ ಶಿಕ್ಷೆಯಾಗುವ ಸಾಧ್ಯತೆಗಳಿದ್ದು, ಪೆರೋಲ್ ಮೇಲೆ ಹೊರ ಬರುವ ಅವಕಾಶಗಳು ಆತನಿಗೆ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
ನ್ಯಾಯಾಲಯದ ವಿಚಾರಣೆ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಶ್ರೀನಿವಾಸ್ ಕುಚಿಬೋಟ್ಲಾ ಅವರ ಪತ್ನಿ ಸುನಯನಾ ದುಮಲಾ ಅವರು, ಹಂತಕನಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ದ್ವೇಷವನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಾರಬೇಕಿದೆ. ಒಬ್ಬ ವ್ಯಕ್ತಿಯ ಮೇಲೆ ಮತ್ತೊಬ್ಬರು ಇಟ್ಟಿರುವ ಪ್ರೀತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಜನಾಂಗ, ವರ್ಣ, ಧರ್ಮ ಮತ್ತು ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಕೂಗಾಡಿದ್ದ ಆ್ಯಡಂ ಪುರಿಟನ್, ಹೈದರಾಬಾದ್ ಮೂಲದ ಟೆಕ್ಕಿ ಶ್ರೀನಿವಾಸ ಕುಚಿಬೋಟ್ಲಾ ಅವರನ್ನು 2017ರ ಫೆಬ್ರವರಿ 22 ರಂದು ಕನ್ಸಾಸ್ ನಗರದ ಆಸ್ಟಿನ್ ಬಾರ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದ. ಈ ವೇಳೆ ಶ್ರೀನಿವಾಸ್ ಅವರ ರಕ್ಷಣೆಗೆ ಮುಂದಾಗಿದ್ದ ವರಂಗಲ್ ಮೂಲದ ಅಕೋಲ್ ಮೇಡಸಾನಿ ಅವರ ಮೇಲೂ ಗುಂಡಿನ ದಾಳಿ ನಡೆಸಿದ್ದ, ಪರಿಣಾಮ ಮೇಡಸಾನಿಯವರು ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದರು.
ಶ್ರೀನಿವಾಸ್ ಅವರು ತಮ್ಮ ಗೆಳೆಯನ ಜೊತೆಗೆ ಕನ್ಸಾಸ್ ಬಾರ್ ನಲ್ಲಿದ್ದ ಸಂದರ್ಭದಲ್ಲಿ ಬಾರ್ ಗೆ ಬಂದ ಆ್ಯಡಂ ಶ್ರೀನಿವಾಸ್ ಹಾಗೂ ಅವರ ಗೆಳೆಯನನ್ನು ಮಿಡಲ್ ಈಸ್ಟರ್ನ್ (ಮಧ್ಯಪ್ರಾಚ್ಯ ದೇಶದವರು) ಎಂದು ಕರೆದು ನನ್ನ ದೇಶ ಬಿಟ್ಟು ತೊಲಗಿ ಎಂದು ಕಿರುಚಾಡುತ್ತಾ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ. ಗುಂಡಿನ ದಾಳಿ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದ ಹಂತಕ, ಮಿಸ್ಸೌರಿಯ ಸ್ಥಳೀಯ ಬಾರ್ ವೊಂದಕ್ಕೆ ತೆರಳಿ ನಾನು ಇಬ್ಬರು ಮಧ್ಯಪ್ರಾಚ್ಯ ವ್ಯಕ್ತಿಗಳನ್ನು ಹತ್ಯೆ ಮಾಡಿದ್ದೇನೆಂದು ಹೇಳಿದ್ದ. ಇದನ್ನು ಕೇಳಿದ್ದ ಅಲ್ಲಿನ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನೆ ನಡೆದ 5 ಗಂಟೆಗಳೊಳಗೆ ಹಂತಕನನ್ನು ಅಲ್ಲಿನ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು.
ಭಾರತೀಯ ವ್ಯಕ್ತಿ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಅಲ್ಲದೆ, ಅಮೆರಿಕದಲ್ಲಿರುವ ಭಾರತೀಯರು ಬಹಳ ಎಚ್ಚರದಿಂದ ಇರುವಂತೆ ತಿಳಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಘಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರವಾಗಿ ಖಂಡಿಸಿದ್ದರು.