ಬೀಜಿಂಗ್: ಚೀನಾ ತನ್ನ ನೆಲದ ಒಂದಿಂಚನ್ನೂ ಬಿಟ್ಟುಕೊಡುವುದಿಲ್ಲ. ತನ್ನ ವೈರಿಗಳ ವಿರುದ್ಧ ರಕ್ತಸಿಕ್ತ ಯುದ್ಧಕ್ಕೂ ಸಿದ್ದವಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ತಿಳಿಸಿದ್ದಾರೆ.
ಚೀನಾ ಸಂಸತ್ತಿನಲ್ಲಿ ನಡೆದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ನ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಅಧ್ಯಕ್ಷ ಜಿಂಪಿಂಗ್ "ನಮ್ಮ ಭೂಮಿಯಲ್ಲಿ ಒಂದೇ ಒಂದು ಇಂಚನ್ನೂ ನಾವು ಬಿಟ್ಟುಕೊಡುವುದಿಲ್ಲ. ಹಾಗೇ ನಮ್ಮ ವೈರಿಗಳ ವಿರುದ್ಧ ರಕ್ತಸಿಕ್ತವಾದ ಹೋರಾಟಕ್ಕೆ ನಾವು ಸಿದ್ದರಿದ್ದೇವೆ" ಎಂದು ಹೇಳಿದರು.
ತೈವಾನ್ ಹಾಗೂ ಹಾಂಗ್ ಕಾಂಗ್.ಚೀನಾದಿಂದ ಪ್ರತ್ಯೇಕಗೊಳ್ಳುತ್ತವೆ ಎಂದು ಚೀನಾ ಭೀತಿಗೊಳಗಾಗಿದೆ.
ಸ್ವತಂತ್ರ ಆಡಳಿತವಿರುವ ತೈವಾನ್ ದ್ವೀಪ ತನ್ನದೆಂದು ಚೀನಾ ಹೇಳಿಕೊಳ್ಳುತ್ತಿದೆ. ಮುಂದೊಂದು ದಿನ ತೈವಾನ್ ಚೀನಾ ಆಡಳಿತದೊಳಗೆ ಬರಲಿದೆ ಎಂದು ಅದು ಭರವಸೆ ಇರಿಸಿಕೊಂಡಿದೆ. ಇನ್ನು ಹಿಂದೆ ಬ್ರಿಟೀಷ್ ವಸಾಹತುವಾಗಿದ್ದ ಹಾಂಗ್ ಕಾಂಗ್ ನ ಜನರು ಇತ್ತೀಚೆಗೆ ಬೆಳೆಯುತ್ತಿರುವ ಚೀನಾ, ಬೀಜಿಂಗ್ ಹಸ್ತಕ್ಷೇಪಕ್ಕೆ ಅಸಮಾಧಾನಗೊಂಡಿದ್ದಾರೆ. ಹಾಂಗ್ ಕಾಂಗ್ ಪ್ರಸ್ತುತ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದೆ.
ಇನ್ನು ಅಧ್ಯಕ್ಷರ ಮಾತಿಗೆ ಸಮ್ಮತಿ ಸೂಚಿಸಿದ ಚೀನಾ ಪ್ರಧಾನಿ ಲಿ ಕೆಕಿಯಾಂಗ್ "ಚೀನಾ ತನ್ನದೇ ಆದ ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯುವಲ್ಲಿ ದೃಢನಿಶ್ಚಯವನ್ನು ಹೊಂದಿದೆ ತನ್ನ ಭೂಮಿಯ ಒಂದು ಇಂಚನ್ನೂ ಬಿಟ್ಟುಕೊಡುವುದಿಲ್ಲ. ಹಾಗೆಯೇ ಇತರರ ಭೂಪ್ರದೇಶವನ್ನು ಚೀನಾ ಎಂದಿಗೂ ಅತಿಕ್ರಮಿಸುವುದಿಲ್ಲ" ಅಧಿವೇಶನ ಮುಕ್ತಾಯಗೊಂಡ ದಿನ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.