ವಿದೇಶ

ಸುಳ್ಳು ಸುದ್ದಿ ಪ್ರಕಟಿಸಿದರೆ 10 ವರ್ಷ ಜೈಲು ಶಿಕ್ಷೆ ?

Srinivasamurthy VN
ಕೌಲಾಲಂಪುರ: ಪ್ರಮುಖ ಬೆಳವಣಿಗೆಯೊಂದರಲ್ಲಿ ಮಲೇಷ್ಯಾ ಸರ್ಕಾರ ಸುಳ್ಳು ಪ್ರಕಟಿಸುವವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಮಹತ್ವದ ಮಸೂದೆಯನ್ನು ಸಂಸತ್ತಿನಲ್ಲಿ ಸೋಮವಾರ ಮಂಡಿಸಿದೆ.
‘ಸುಳ್ಳು ಸುದ್ದಿ’ಗೆ ಕಡಿವಾಣ ಹಾಕಲು ಮುಂದಾಗಿರುವ ಮಲೇಷ್ಯಾ ಸರ್ಕಾರ, ಈ ಸಂಬಂಧ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮಸೂದೆಯನ್ನು ಸಂಸತ್ತಿನಲ್ಲಿ ಸೋಮವಾರ ಮಂಡಿಸಲಾಗಿದೆ. ಅದರಂತೆ ಸುಳ್ಳು ಸುದ್ದಿ ಪ್ರಕಟಿಸುವವರಿಗೆ ಮತ್ತು ಅದಕ್ಕೆ ಪ್ರಚೋದನೆ ನೀಡುವವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಕಾನೂನು ಜಾರಿಗೆ ಮುಂದಾಗಿದ್ದು, ಈ ಸಂಬಂಧ ನಿನ್ನೆ ಮಸೂದೆಯೊಂದನ್ನು ಮಂಡಿಸಿದೆ.
ಈ ಮಸೂದೆ ಕಾನೂನಾಗಿ ಜಾರಿಯಾಗಿದ್ದೇ ಆದರೆ, ಸುಳ್ಳು ಸುದ್ದಿ ಪ್ರಕಟಿಸಿದ್ದು ಕಾನೂನು ಪ್ರಕಾರ ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ ₹84.37 ಲಕ್ಷ (5ಲಕ್ಷ ರಿಂಗ್ಗಿಟ್‌) ದಂಡ ವಿಧಿಸಬಹುದಾಗಿದೆ ಎಂದು ತಿಳಿದುಬಂದಿದೆ.
ಇನ್ನು ಮಲೇಷ್ಯಾ ಸರ್ಕಾರದ ಈ ಮಸೂದೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷಗಳೂ ಸೇರಿದಂತೆ ಮಾಧ್ಯಮಗಳು ವ್ಯಾಪಕ ವಿರೋಧ ಪಡಿಸಿವೆ. ವಿರೋಧಿಗಳನ್ನು ಹತ್ತಿಕ್ಕಲು ಹೊಸ ಕಾನೂನು ಬಳಕೆಯಾಗುವ ಸಂಭವ ಇದೆ ಎಂದು ಪ್ರತಿಪಕ್ಷಗಳು ಆತಂಕ ವ್ಯಕ್ತಪಡಿಸಿದ್ದು, ಪ್ರಧಾನಿ ನಜೀಬ್ ರಜಾಕ್ ಹಿಟ್ಲರ್ ರಂತೆ ವರ್ತಿಸುತ್ತಿದ್ದಾರೆ ಎಂದು ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿವೆ.
ಮಲೇಷ್ಯಾದ ಪ್ರಧಾನಿ ನಜೀಬ್‌ ರಜಾಕ್‌ ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದ ಆಕ್ರೋಶಗೊಂಡ ಅವರು ಮಾಧ್ಯಮ ಸ್ವಾತಂತ್ರ್ಯವನ್ನೇ ಹತ್ತಿಕ್ಕಲು ಮುಂದಾಗಿದ್ದಾರೆ ಎಂದು ಪ್ರತಿಪಕ್ಷದ ಸಂಸದ ಚಾರ್ಲ್ಸ್‌ ಸಾಂಟಿಯಾಗೊ ಆರೋಪಿಸಿದ್ದಾರೆ.
SCROLL FOR NEXT