ವಿದೇಶ

ಸ್ಮಗ್ಲಿಂಗ್‌ ಆರೋಪ: ಬ್ರಿಸ್ಬೇನ್‌ ವಿಮಾನ ನಿಲ್ದಾಣದಲ್ಲಿ 9 ಭಾರತೀಯರ ಬಂಧನ

Srinivasamurthy VN
ಬ್ರಿಸ್ಬೇನ್: ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಆಸ್ಟ್ರೇಲಿಯಾದಲ್ಲಿ 9 ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 9 ಮಂದಿ ಭಾರತೀಯರನ್ನು ಸ್ಮಗ್ಲಿಂಗ್‌ ಆರೋಪದಲ್ಲಿ ಆಸ್ಟ್ರೇಲಿಯಾ ಬಾರ್ಡರ್‌ ಫೋರ್ಸ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಥಾಯ್‌ಲ್ಯಾಂಡ್‌ನಿಂದ ತೆರಳಿದ್ದ ವಿಮಾನಿದಿಂದ ಇಳಿಯುತ್ತಿದ್ದಂತೆ 9 ಮಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ಎಬಿಎಫ್ ಮೂಲಗಳು ತಿಳಿಸಿವೆ. ಸ್ಮಗ್ಲಿಂಗ್‌ ಆರೋಪದ ಹಿನ್ನಲೆಯಲ್ಲಿ ವಶಕ್ಕೆ ಪಡೆಯಲಾಗಿರುವ 9 ಮಂದಿಯನ್ನು ಎಬಿಎಸ್‌ ತೀವ್ರವಾಗಿ ವಿಚಾರಣೆ ನಡೆಸುತ್ತಿದೆ. ಕಾಮನ್‌ವೆಲ್ತ್‌ ಗೇಮ್ಸ್‌ ಹಿನ್ನಲೆಯಲ್ಲಿ ಆಸ್ಟೇಲಿಯಾಕ್ಕೆ ಆಗಮಿಸುವ ವಿದೇಶಿಗರ ಮೇಲೆ ವಿಮಾನ ನಿಲ್ದಾಣದಲ್ಲಿ ವಿಶೇಷ ನಿಗಾ ಇರಿಸಲಾಗಿದೆ.
ಪ್ರಸ್ತುತ ಬಂಧಿತರಾಗಿರುವ ಆರೋಪಿಗಳೂ ಕೂಡ ಅಧಿಕಾರಿಗಳ ಬಳಿ ತಾವು ಪತ್ರಕರ್ತರು ಎಂದು ಹೇಳಿಕೊಂಡಿದ್ದು, ಕಾಮನ್ ವೆಲ್ತ್ ಕ್ರೀಡಾಕೂಟದ ವರದಿಗಾರಿಕೆಗಾಗಿ ಇಲ್ಲಿಗೆ ಆಗಮಿಸಿದ್ದೇವೆ ಎಂದು ಹೇಳಿದ್ದಾರೆ. ಆರೋಪಿಗಳ ಮಾತನ್ನು ಶಂಕಿಸಿರುವ ಅಧಿಕಾರಿಗಳು ಎಲ್ಲ 9 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬಂಧಿತರಲ್ಲಿ ಓರ್ವ ರಾಕೇಶ್‌ ಶರ್ಮಾ ಎಂದು ತಿಳಿದು ಬಂದಿದ್ದು, ನಕಲಿ ದಾಖಲೆಗಳು ವೀಸಾದಲ್ಲಿ ಗೊಂದಲಗಳು ಕಂಡು ಬಂದಿರುವುದಾಗಿ ಆಸೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಶರ್ಮಾನನ್ನು ಅಧಿಕಾರಿಗಳು ಏಪ್ರಿಲ್ 6ರವರೆಗೂ ವಶಕ್ಕೆ ತೆಗೆದುಕೊಂಡಿದ್ದಾರೆ.
SCROLL FOR NEXT