ವಿದೇಶ

ಫೇಸ್ ಬುಕ್ ದತ್ತಾಂಶ ದುರ್ಬಳಕೆ ಆರೋಪ: ಎಲ್ಲಾ ಕಾರ್ಯಚರಣೆಗಳನ್ನು ನಿಲ್ಲಿಸುವುದಾಗಿ ಕೇಂಬ್ರಿಡ್ಜ್ ಅನಾಲಿಟಿಕಾ ಘೋಷಣೆ

Sumana Upadhyaya

ಲಂಡನ್: ಫೇಸ್ ಬುಕ್ ದತ್ತಾಂಶ ಹಗರಣದ ಕೇಂದ್ರಬಿಂದು ಇಂಗ್ಲೆಂಡಿನ ಮಾರುಕಟ್ಟೆ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾ, ತಕ್ಷಣವೇ ಎಲ್ಲಾ ಕಾರ್ಯಚರಣೆಗಳನ್ನು ನಿಲ್ಲಿಸಿ ದಿವಾಳಿತನ ಕಾನೂನು ಪ್ರಕ್ರಿಯೆಗೆ ಬ್ರಿಟನ್ ಮತ್ತು ಇಂಗ್ಲೆಂಡಿನಲ್ಲಿ ಅರ್ಜಿ ಸಲ್ಲಿಸುವುದಾಗಿ ಘೋಷಿಸಿದೆ.

ಇನ್ನು ಮುಂದೆ ವಹಿವಾಟು ಕಾರ್ಯಾಚರಣೆಯನ್ನು ಮುಂದುವರಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ ಎಂದು ಲಕ್ಷಾಂತರ ಮಂದಿಯ ಫೇಸ್ ಬುಕ್ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ತಿಂಗಳಲ್ಲಿ ಅನೇಕ ಸಂಬಂಧಪಡದಿರುವ ಆರೋಪಗಳನ್ನು ಕಂಪೆನಿ ಎದುರಿಸುತ್ತಿದ್ದು ಅದು ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆಯಲ್ಲಿ ಫೇಸ್ ಬುಕ್ ಬಳಕೆದಾರರ ಮನವೊಲಿಸಿ ಅವರ ಗೆಲುವಿಗೆ ಕಾರಣವಾಗಿತ್ತು ಎಂಬ ಆರೋಪ ಪ್ರಮುಖವಾಗಿ ಕೇಳಿಬರುತ್ತಿದೆ.

ಡೊನಾಲ್ಡ್ ಟ್ರಂಪ್ ಆಯ್ಕೆ ವಿಚಾರದಲ್ಲಿ ಮತದಾರರ ಮನವೊಲಿಸಲು ಅವರ ಫೇಸ್ ಬುಕ್ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿತ್ತು ಎಂಬುದನ್ನು ಸಾರಾಸಗಟಾಗಿ ಕೇಂಬ್ರಿಡ್ಜ್ ಅನಾಲಿಟಿಕಾ ತಳ್ಳಿಹಾಕಿದೆ. ಆದರೆ ಫೇಸ್ ಬುಕ್, ಸುಮಾರು 87 ದಶಲಕ್ಷ ಬಳಕೆದಾರರ ದಾಖಲೆಗಳನ್ನು ಕೇಂಬ್ರಿಡ್ಜ್ ಹೈಜಾಕ್ ಮಾಡಿದೆ ಎಂದು ಫೇಸ್ ಬುಕ್ ಒಪ್ಪಿಕೊಂಡಿತ್ತು.

ಸಾಮಾಜಿಕ ಮಾಧ್ಯಮ ಸೇವಾ ನಿಯಮಗಳನ್ನು ಉಲ್ಲಂಘನೆ ಮಾಡಿದ ಫೇಸ್ ಬುಕ್ ಬಳಕೆದಾರರ ದಾಖಲೆಗಳನ್ನು ಅಳಿಸಿಹಾಕಿದ್ದೇವೆ ಎಂದು ಕೇಂಬ್ರಿಡ್ಜ್ ಅನಾಲಿಟಿಕಾ ಹೇಳಿದೆ.

ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಬ್ರಿಟಿಷ್ ಬ್ಯಾರಿಸ್ಟರ್ ಜುಲಿಯನ್ ಮಾಲಿನ್ಸ್ ಅವರನ್ನು ಕಂಪೆನಿ ನೇಮಕ ಮಾಡಿದ್ದು, ಅವರ ಪೋಸ್ಟ್ ನ್ನು ಕೇಂಬ್ರಿಡ್ಜ್ ನಿನ್ನೆ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು. ವಾಸ್ತವಾಂಶಗಳನ್ನಿಟ್ಟುಕೊಂಡು ಆರೋಪ ಮಾಡುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಕೇಂಬ್ರಿಡ್ಜ್ ಅನಾಲಿಟಿಕಾ ಪ್ರತಿಪಾದಿಸಿದೆ.

ತಮ್ಮ ಕಂಪೆನಿಯ ನೌಕರರು ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ ಎನ್ನುವ ಕೇಂಬ್ರಿಡ್ಜ್ ಅನಾಲಿಟಿಕಾ ಮಾಧ್ಯಮಗಳಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಬರುತ್ತಿರುವ ಸತತ ಆರೋಪಗಳು ಮತ್ತು ವರದಿಗಳಿಂದ ಕಂಪೆನಿಯ ಪೂರೈಕೆದಾರರು ಮತ್ತು ಗ್ರಾಹಕರು ಕಡಿಮೆಯಾಗಿದ್ದಾರೆ ಎಂದಿದೆ.

ಕಂಪೆನಿಯ ಮಂಡಳಿ ಬ್ರಿಟನ್ ನಲ್ಲಿ ದಿವಾಳಿತನ ಪ್ರಕ್ರಿಯೆಯನ್ನು ನೋಡಿಕೊಳ್ಳಲು ವಕೀಲರನ್ನು ನೇಮಕ ಮಾಡಿದೆ ಮತ್ತು ಅವರು ಅಮೆರಿಕಾದಲ್ಲಿ ಕಾನೂನು ತನಿಖೆ ನೋಡಿಕೊಳ್ಳಲಿದ್ದಾರೆ ಎಂದಿದೆ.

SCROLL FOR NEXT